ರಾಮನಗರ: ತಾಲ್ಲೂಕಿನ ರಾಮನಗರ-ಕನಕಪುರ ಮುಖ್ಯ ರಸ್ತೆಯ ಅಚ್ಚಲು ಕ್ರಾಸ್‌ನಲ್ಲಿ ಗುರುವಾರ ಬೆಳಿಗ್ಗೆ ಕೆ.ಎಸ್.ಆರ್.ಟಿ.ಸಿ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.
ಪ್ರದೀಪ್ (೫) ಮತ್ತು ಭವ್ಯ (೩) ಮೃತರು. ಇಬ್ಬರೂ ತಮಿಳುನಾಡಿನ ಡೆಂಕಣಿಕೋಟೆಯ ಬೋಕಸಂದ್ರ ಗ್ರಾಮದ ಭೈರಪ್ಪ ಅವರ ಮಕ್ಕಳು. ಭೈರಪ್ಪ ಅವರು ತಮ್ಮ ಸಂಬಂಧಿ ಅಚ್ಚಲು ದೊಡ್ಡಿ ಕಾಲೊನಿಯ ಗೋವಿಂದ ಅವರ ಮನೆಗೆ ಮಕ್ಕಳನ್ನು ಕಳಿಸಿದ್ದರು. ರಾಮನಗರ ತಾಲ್ಲೂಕಿನ ಲಕ್ಕಪ್ಪನಹಳ್ಳಿಯ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಗೋವಿಂದ ಅವರು ಬೆಳಿಗ್ಗೆ ೯ ಗಂಟೆ ಸುಮಾರಿಗೆ ಮಕ್ಕಳು ಹಾಗೂ ಸ್ನೇಹಿತ ಮಧು ಅವರನ್ನು ಕರೆದುಕೊಂಡು ತಮ್ಮ ಟಿವಿಎಸ್ ಎಕ್ಸೆಲ್ ಸ್ಕೂಟರ್‌ನಲ್ಲಿ ಫಾರಂಗೆ ಹೋಗುತ್ತಿದ್ದರು ಎಂದು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.
ಮಾರ್ಗಮಧ್ಯೆ ಗ್ರಾಮದ ತಿರುವಿನಲ್ಲಿ ಎದುರಿಗೆ ವೇಗವಾಗಿ ಬಂದ ಕನಕಪುರ ಕಡೆಗೆ ಹೊರಟಿದ್ದ ಬಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಮುಂಭಾಗದಲ್ಲಿ ಕುಳಿತಿದ್ದ ಮಕ್ಕಳಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.
ಘಟನೆಯಲ್ಲಿ ಮಧು ಅವರಿಗೆ ಗಂಭೀರವಾಗಿ ಗಾಯಗೊಂಡಿದ್ದು, ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಮಂಡ್ಯಕ್ಕೆ ಕಳಿಸಲಾಗಿದೆ. ಗೋವಿಂದ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದರು.