Saturday, December 13, 2025
Google search engine

Homeರಾಜ್ಯಸುದ್ದಿಜಾಲಪ್ರೇಮಿಗಳಿಬ್ಬರು ಮನೆ ಬಿಟ್ಟು ಹೋಗಲು ಸಹಕರಿಸಿದ್ದಾರೆ ಎಂದು ತಪ್ಪು ಕಲ್ಪನೆಯಿಂದ ಇಬ್ಬರನ್ನು ಚೂರಿಯಿಂದ ಇರಿದು ಕೊಲೆ

ಪ್ರೇಮಿಗಳಿಬ್ಬರು ಮನೆ ಬಿಟ್ಟು ಹೋಗಲು ಸಹಕರಿಸಿದ್ದಾರೆ ಎಂದು ತಪ್ಪು ಕಲ್ಪನೆಯಿಂದ ಇಬ್ಬರನ್ನು ಚೂರಿಯಿಂದ ಇರಿದು ಕೊಲೆ

ಶಿವಮೊಗ್ಗ: ಪ್ರೇಮಿಗಳಿಬ್ಬರು ಮನೆ ಬಿಟ್ಟು ಓಡಿ ಹೋಗಲು ಸಹಕರಿಸಿದ್ದಾರೆ ಎಂದು ತಪ್ಪು ಕಲ್ಪನೆಯಿಂದ ವ್ಯಕ್ತಿಯೊಬ್ಬ ಇಬ್ಬರನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಭದ್ರಾವತಿಯಲ್ಲಿ ತಡ ರಾತ್ರಿ ನಡೆದಿದೆ.

ಭದ್ರಾವತಿಯ ಜೈ ಭೀಮ್ ನಗರದ ಕಿರಣ್(25) ಹಾಗೂ ಪೌರ ಕಾರ್ಮಿಕ ಮಂಜುನಾಥ್(45) ಕೊಲೆಯಾದ ದುರ್ದೈವಿಗಳು. ಘಟನೆ ಕುರಿತು ಸಂಜಯ್, ಶಶಿ, ವೆಂಕಟೇಶ್, ಭರತ್ ಹಾಗೂ ಸುರೇಶ್ ಸೇರಿ ಐವರನ್ನು ಬಂಧಿಸಿರುವುದಾಗಿ ಎಸ್​ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.

ಭದ್ರಾವತಿಯ ಹಳೇ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೈ ಭೀಮ್ ನಗರದ ಪ್ರೇಮಿಗಳಿಬ್ಬರು ಮೊನ್ನೆ ದಿನ ಮನೆಯಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಪ್ರೇಮಿಗಳ ಪೋಷಕರು ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕಳೆದ ಎರಡು ದಿನಗಳ ಹಿಂದೆ ನಂದೀಶ್ ಮತ್ತು ಸೃಷ್ಟಿ ಎಂಬ ಪ್ರೇಮಿಗಳು ಮನೆ ಬಿಟ್ಟು ಹೋಗಿದ್ದರು. ನಿನ್ನೆ ಸಂಜೆ ಅವರು ಭದ್ರಾವತಿ ಹಳೆ ಪೊಲೀಸ್ ಠಾಣೆಗೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.

ಆಗ ಜೈ ಭೀಮ್ ನಗರದ ಕಿರಣ್, ಮಂಜುನಾಥ್ ಸೇರಿ ಹಲವರು ಪೊಲೀಸ್ ಠಾಣೆಗೆ ಬಂದು ಪ್ರೇಮಿಗಳಿಬ್ಬರ ಬಳಿ ಮಾತನಾಡುವಾಗ ಹುಡುಗಿಯ ಸಹೋದರ ಬಂದು ನನ್ನ ತಂಗಿಯ ಪ್ರೇಮಕ್ಕೆ ನೀವೆಲ್ಲಾ ಬೆಂಬಲ ನೀಡಿದ್ದೀರಿ ಎಂದು ಗಲಾಟೆ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ಹುಡುಗಿಯ ಸಹೋದರ, ರಾತ್ರಿ ಕಿರಣ್, ಮಂಜುನಾಥ್ ಮನೆಯ ಬಳಿ ಬಂದು ಜಗಳ ತೆಗೆದಿದ್ದಾನೆ.

ಈ ವೇಳೆ ಜಗಳ ವಿಕೋಪಕ್ಕೆ ಹೋಗಿದ್ದು, ನನ್ನ ತಂಗಿ ಓಡಿ ಹೋಗಲು ನೀವೇ ಕಾರಣ ಎಂದು ತಂದಿದ್ದ ಚಾಕುವಿನಿಂದ ಕಿರಣ್ ಹಾಗೂ ಮಂಜುನಾಥನಿಗೆ ಇರಿದು ಸ್ಥಳದಿಂದ ಪರಾರಿಯಾಗಿದ್ಧಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಪೌರ ಕಾರ್ಮಿಕ ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟರೆ, ಕಿರಣ್ ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ.

ಪ್ರಕರಣ ಸಂಬಂಧ ಹಳೇ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಐವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನೂ ಹಲವರಿದ್ದು, ಅವರನ್ನು ಬಂಧಿಸುವಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular