ಮಂಗಳೂರು (ದಕ್ಷಿಣ ಕನ್ನಡ):ಅತಿ ವೇಗದಿಂದ ಬಂದ ಖಾಸಗಿ ಬಸ್ಸೊಂದು ರಸ್ತೆ ದಾಟಲೆಂದು ನಿಂತಿದ್ದ ಬೈಕ್ ಗೆ ಢಿಕ್ಕಿ ಹೊಡೆದು ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮಂಗಳೂರು ನಗರದ ರಾಷ್ಟ್ರೀಯ ಹೆದ್ದಾರಿ 66ರ ಹೊಸಬೆಟ್ಟು ಎಂಬಲ್ಲಿ ನಡೆದಿದೆ. ಈ ಅಪಘಾತದ ತೀವ್ರತೆಯ ಸಿಸಿಟಿವಿ ವೀಡಿಯೋ ವೈರಲ್ ಆಗಿದೆ. ಗಾಯಗೊಂಡವರನ್ನು ಮುಹಮ್ಮದ್ ಸಾಹಿಲ್ ಹಾಗೂ ಅರಾಫತ್ ಎಂದು ಗುರುತಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಎಂಬಲ್ಲಿ ಬೈಕ್ ನಲ್ಲಿ ಇವರಿಬ್ಬರು ರಸ್ತೆ ದಾಟಲು ಡಿವೈಡರ್ ಬಳಿ ನಿಂತಿದ್ರು. ಇದೇ ವೇಳೆ ಅತ್ಯಂತ ವೇಗದಲ್ಲಿ ಬಂದ ಮಂಗಳೂರು – ಉಡುಪಿ ಖಾಸಗಿ ವೇಗದೂತ ಬಸ್ ರಸ್ತೆ ಬದಿ ನಿಂತಿದ್ದ ಬೈಕ್ ಗೆ ಢಿಕ್ಕಿ ಹೊಡೆದು ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ನಿಂತಿದೆ.
ಬಸ್ ಢಿಕ್ಕಿಯಾದ ಪರಿಣಾಮ ಯುವಕರು ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ತೀವ್ರತೆಯ ಸಿಸಿಟಿವಿ ವೀಡಿಯೋ ಇದೀಗ ವೈರಲ್ ಆಗಿದೆ. ಈ ಬಗ್ಗೆ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.