ನವದೆಹಲಿ: ಮೈಸೂರಿನಲ್ಲಿ ಪೊಲೀಸ್ ಸ್ಟೇಷನ್ ಮೇಲೆ ರಾಜಕಾರಣಿಗಳ ಕುಮ್ಮಕ್ಕಿನಿಂದ ದಾಳಿ ನಡೆದಿದ್ದು, ಇದು ನೇರವಾಗಿ ಕಾಂಗ್ರೆಸ್ ಸರ್ಕಾರದ ಮೇಲಿನ ದಾಳಿಯಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ, ಕೇರಳ ತಮಿಳುನಾಡಿನಲ್ಲಿ ಒಂದು ವರ್ಗ ಮತ್ತು ಸಂಘಟನೆ, ನಮ್ಮ ಇಡೀ ದೇಶ ಹಾಗೂ ವ್ಯವಸ್ಥೆಯನ್ನು ಸವಾಲು ಮಾಡುವ ರೀತಿ ಕಾರ್ಯ ಚಟುವಟಿಕೆ ಮಾಡುತ್ತಿವೆ. ಪಿಎಫ್‌ಐ ನಿಷೇಧ ಆಗಿದೆ. ಆದರೂ ಕೂಡ ಆ ಸಂಸ್ಥೆಯ ಕಾರ್ಯಕರ್ತರು ಬೇರೆ ಬೇರೆ ಹೆಸರಿನಲ್ಲಿ ಕಾರ್ಯಚಟುವಟಿಕೆ ಮಾಡುತ್ತಿದ್ದಾರೆ ಎಂದರು.
ಮಂಗಳೂರು, ಕೆಜಿ ಹಳ್ಳಿ, ಡಿಜೆ ಹಳ್ಳಿ, ಹುಬ್ಬಳ್ಳಿಯಲ್ಲಿ ನಡೆದ ಘಟನೆಗಳಿಗೂ ಮೈಸೂರಿನಲ್ಲಿ ನಡೆದ ಘಟನೆಗೂ ಸಾಮ್ಯತೆ ಇದೆ. ನಮ್ಮ ಸರ್ಕಾರ ಇದ್ದಾಗ ಕಠಿಣ ಕ್ರಮ ಕೈಗೊಂಡು ಹಲವಾರು ಜನರನ್ನು ಜೈಲಿಗೆ ಹಾಕಿದ್ದೆವು. ಈ ಸರ್ಕಾರ ಬಂದ ಮೇಲೆ ಹುಬ್ಬಳ್ಳಿಯಲ್ಲಿ ನಡೆದ ಘಟನೆಯಲ್ಲಿ ಭಾಗಿಯಾದವರ ಮೇಲಿನ ಎಲ್ಲ ಪ್ರಕರಣಗಳನ್ನು ವಾಪಸ್ ಪಡೆದು ಅವರೆಲ್ಲರೂ ಅಮಾಯಕರು ಎಂದು ಹೇಳಿದರು.