ಉಡುಪಿ-ಕಾಸರಗೋಡು 400 ಕೆ.ವಿ. ವಿದ್ಯುತ್ ಮಾರ್ಗ ಯೋಜನೆ
ಮಂಗಳೂರು (ದಕ್ಷಿಣ ಕನ್ನಡ): ಕಾಸರಗೋಡು 400 ಕೆವಿ ಮತ್ತು ಪಾಲಡ್ಕ-ಕಡಂದಲೆ 400/220 ಕೆವಿ ವಿದ್ಯುತ್ ಪ್ರಸರಣ ಮಾರ್ಗ ಕಾಮಗಾರಿಯನ್ನು ವಿರೋಧಿಸಿ ಫೆ.20ರಂದು ಬೆಳಗ್ಗೆ 9:30ಕ್ಕೆ ಮಂಗಳೂರು ನಗರದ ಬಲ್ಮಠದಿಂದ ಮಿನಿ ವಿಧಾನಸೌಧದವರೆಗೆ ಹಕ್ಕೊತ್ತಾಯ ಜಾಥಾ ಮತ್ತು ಪೂ.11ಕ್ಕೆ ನಗರದ ನೆಹರೂ ಮೈದಾನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ವಿದ್ಯುತ್ ಪ್ರಸರಣ ಮಾರ್ಗ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟ ತಿಳಿಸಿದೆ.
ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಇದರ ನೇತೃತ್ವದ ಕಥೊಲಿಕ್ ಸಭಾ ಉಡುಪಿ ಪ್ರದೇಶ (ರಿ) ಉಡುಪಿ, ರೈತ ಸಂಘ -ಹಸಿರು ಸೇನೆ, ಭಾರತೀಯ ಕಿಸಾನ್ ಸಂಘ (ರಿ) ಕರ್ನಾಟಕ ಪ್ರದೇಶ, ಪರಿಸರ ಸಂಗಮ-ಜೀವ ಸಂಕುಲ ಪರ ವೇದಿಕೆ, ಉಡುಪಿ ಜಿಲ್ಲಾ ಕೃಷಿಕರ ಸಂಘ ಹಾಗೂ ಸಮಾನ ಮನಸ್ಕ ರೈತ ಪರ ಸಂಘ -ಸಂಸ್ಥೆಗಳು ದ.ಕ., ಉಡುಪಿ, ಐಸಿವೈಎಂ ಮಂಗಳೂರು ಧರ್ಮ ಪ್ರಾಂತ ಮತ್ತು ಕಾಸರಗೋಡು ಜಿಲ್ಲೆ ಇವುಗಳ ಸಹಭಾಗಿತ್ವದಲ್ಲಿ ನಡೆಯುವ ಈ ಜಾಥಾ ಮತ್ತು ಪ್ರತಿಭಟನೆಯಲ್ಲಿ ಸುಮಾರು 15 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೋರಾಟ ಸಮಿತಿಯ ಮುಖಂಡರಾದ ಪಾವ್ ರೋಲ್ಸಿ ಡಿಕೋಸ್ತ ಚಂದ್ರಹಾಸ ಶೆಟ್ಟಿ ಮಂಗಳೂರಲ್ಲಿ ನಡೆದ ಪ್ರೆಸ್ ಮೀಟ್ ನಲ್ಲಿ ತಿಳಿಸಿದ್ದಾರೆ.