Thursday, April 3, 2025
Google search engine

Homeರಾಜ್ಯಸುದ್ದಿಜಾಲಸಾಲಿಗ್ರಾಮ ತಾಲ್ಲೂಕಿನ ಹಳಿಯೂರು ಗ್ರಾಮದಲ್ಲಿ ಯುಗಾದಿ ಸಂಭ್ರಮದ ಹೊನ್ನಾರು

ಸಾಲಿಗ್ರಾಮ ತಾಲ್ಲೂಕಿನ ಹಳಿಯೂರು ಗ್ರಾಮದಲ್ಲಿ ಯುಗಾದಿ ಸಂಭ್ರಮದ ಹೊನ್ನಾರು

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಬತ್ತದ ಕಣಜದಲ್ಲಿ ಯುಗಾದಿ ಹಬ್ಬದ ನಂತರ ಸಾಲಿಗ್ರಾಮ ತಾಲ್ಲೂಕಿನ ಹಲವೆಡೆ ರೈತರು ಸಂಭ್ರಮದಿಂದ ಹೊನ್ನಾರನ್ನು ಕಟ್ಟಿ ಭೂತಾಯಿ ಯನ್ನು ಪ್ರಾರ್ಥಿಸಿ ತಮ್ಮ ಜಮೀನಿನಲ್ಲಿ ಪೂಜೆ ಸಲ್ಲಿಸಿದರು.
ಸೂರ್ಯೋದಯಕ್ಕೂ ಮುನ್ನವೇ ರೈತರು ಹೊನ್ನೇರನ್ನು ಕಟ್ಟಿ ಹೊಸ ಬಟ್ಟೆಗಳನ್ನು ಧರಿಸಿ ಜಮೀನುಗಳಿಗೆ ಗೊಬ್ಬರ ಸಿಂಪಡಿಸಿ ಉಳುವ ಮೂಲಕ ಹೊಸ ವರ್ಷದ ಮೊದಲ ದಿನ ಕೃಷಿ ಚಟುವಟಿಕೆ ಆರಂಭಿಸಿ ಬೆಳೆ-ಬೆಲೆ ಚೆನ್ನಾಗಿ ಬಂದು ರೋಗ ರುಜಿನ ಮಾಯವಾಗಿ ನೆಮ್ಮದಿಯ ಜೀವನ ಸಿಗಲೆಂದು ಬೇಡುವುದು ಹಿಂದಿನಿಂದಲೂ ನಡೆದು ಬಂದಿರುವ ಸಂಪ್ರದಾಯವಾಗಿದೆ.

ಹೊನ್ನೇರು ಸಡಗರ: ಯುಗಾದಿ ಆರಂಭವಾಗುತ್ತಿದ್ದಂತೆ ಮಳೆ ಬರಲಿದ್ದು, ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಎತ್ತುಗಳು ಮತ್ತು ಗಾಡಿಗೆ ಹೊಂಬಾಳೆ ಕಟ್ಟಿ ಪೂಜೆ ಸಲ್ಲಿಸಿ ಗೊಬ್ಬರವನ್ನು ಜಮೀನುಗಳಿಗೆ ಸಿಂಪಡಿಸುವ ಸಂಪ್ರದಾಯಕ್ಕೆ ಹೊನ್ನೇರು ಎಂದು ಕರೆಯುತ್ತಾರೆ. ತಾಲೋಕಿನ ಬಹುತೇಕ ಗ್ರಾಮಗಳಲ್ಲಿ ಈ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಹಳಿಯೂರು ಹೊನ್ನಾರು

ಚುಂಚನಕಟ್ಟೆ ಹೋಬಳಿಯ ಹಳಿಯೂರು ಗ್ರಾಮದಲ್ಲಿ ಬಹಳ ಹಿಂದಿನಿಂದಲೂ ಹೊನ್ನಾರು ಕಟ್ಟುವ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಗುತ್ತಿದ್ದು ಗ್ರಾಮಸ್ಥರು ಎಲ್ಲರೂ ಒಡಗೂಡಿ ಸಂಪ್ರದಾಯದಂತೆ ಪಂಚಾಂಗದ ಮೂಲಕ ಓರ್ವ ನಾಯಕರನ್ನು ಆಯ್ಕೆ ಮಾಡಿಕೊಂಡು ಅವರ ಮುಂದಾಳತ್ವದಲ್ಲಿ ಗ್ರಾಮಸ್ಥರೆಲ್ಲರೂ ಒಡಗೂಡಿ ಎಲ್ಲಾ ಕುಟುಂಬಗಳಿಂದಲೂ ಹೊನ್ನಾರು ಕಟ್ಟಿಕೊಂಡು ಉಳುಮೆ ಆರಂಭಿಸುವುದು ವಾಡಿಕೆಯಿಂದಲೂ ಬಂದಿದ್ದು ಈ ಬಾರಿ ಪ್ರಥಮ ದರ್ಜೆ ಗುತ್ತಿಗೆದಾರರಾದ ಜಗದೀಶ್ ಅವರ ನೇತೃತ್ವದಲ್ಲಿ ಕಟ್ಟುವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲಾಯಿತು.

ಇದಕ್ಕೂ ಮೊದಲು ಹಬ್ಬದ ಮಾರನೆಯ ದಿನ ಸೋಮವಾರ ಬಂದ ಕಾರಣ ಈ ಭಾಗದ ನಂಬಿಕೆಯಂತೆ ಸೋಮವಾರ ಹೊನ್ನರು ಕಟ್ಟುವ ಕೆಲಸ ಮಾಡುವಂತಿಲ್ಲ ಆದ್ದರಿಂದ ಮಂಗಳವಾರ ಮುಂಜಾನೆ ಗ್ರಾಮದ ಬಸವನಗುಡಿಗೆ ಆಗಮಿಸಿದ ಮುಖಂಡರು ಯುಗಾದಿ ಸಂಪ್ರದಾಯದಂತೆ ಪಂಚಾಂಗ ಶ್ರವಣಕ್ಕೆ ಅನುವು ಮಾಡಿಕೊಟ್ಟರು. ಗ್ರಾಮದ ಹಿರಿಯರಾದ ಸುಬ್ರಮಣ್ಯ ಜೋಯಿಸ್, ಜಯರಾಮ್ ಅ ವರು ಪಂಚಾಂಗ ಶ್ರವಣ ಮಾಡಿದರು. ಆ ಹೊತ್ತಿಗೆ ಬಸವನಗುಡಿಯ ಮುಂದೆ ಗ್ರಾಮದ ಯುವಕರು ತಮ್ಮ ಜಾನು ವಾರುಗಳನ್ನು ನಿಲ್ಲಿಸಿದರು. ಜಾನುವಾರುಗಳು ಮತ್ತು ನೇಗಿಲು ನೊಗಕ್ಕೆ ಪೂಜೆ ಸಲ್ಲಿಸಿದರು. ಬಳಿಕ ನೇಗಿಲನ್ನು ಹೊತ್ತ ರಾಸುಗಳೊಂದಿಗೆ ತಮಟೆಯ ಸದ್ದಿನಲ್ಲಿ ಊರ ಸುತ್ತ ನೇಗಿಲ ಮೂಲಕ ಗೆರೆ ಎಳೆದು ಪ್ರದಕ್ಷಿಣೆ ಹಾಕಿದ ರೈತರು ಈ ಬಾರಿ ಉತ್ತಮ ಮಳೆ ಬೆಳೆಗಾಗಿ ದೇವರಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ರೇಖಾ ಜಗದೀಶ್ , ಸದಸ್ಯ ಮಲ್ಲೇಶಾಚಾರಿ ಮಾಜಿ ಗ್ರಾಪಂ ಅಧ್ಯಕ್ಷ ರಾಜೇಗೌಡ, ಗ್ರಾಮದ ಯಜಮಾನರಾದ ರಾಮೇಗೌಡ, ರಾಮಚಂದ್ರ, ಚಲುವೇಗೌಡ ಬಸವೇಶ್ವರ ಸಂಘ ದ ಯುವಕರು ಮಾರುತಿ, ಅಖಿಲ್, ಪೃಥ್ವಿ ರವಿ ವರುಣ್, ಸಂಜಯ್ ಸೇರಿದಂತೆ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular