Saturday, March 21, 2026
Google search engine

Homeರಾಜ್ಯಸುದ್ದಿಜಾಲಕಾವೇರಿ ತೀರದಲ್ಲಿ ಯುಗಾದಿ ಜಾತ್ರೆ : ಆಲಗೂಡು ಸುತ್ತ ಗ್ರಾಮಗಳಲ್ಲಿ ಭಕ್ತಿ ಸಂಭ್ರಮ

ಕಾವೇರಿ ತೀರದಲ್ಲಿ ಯುಗಾದಿ ಜಾತ್ರೆ : ಆಲಗೂಡು ಸುತ್ತ ಗ್ರಾಮಗಳಲ್ಲಿ ಭಕ್ತಿ ಸಂಭ್ರಮ

ಶ್ರೀರಂಗಪಟ್ಟಣ : ತಾಲ್ಲೂಕಿನ ಆಲಗೂಡು ಮತ್ತು ಆಸುಪಾಸಿನ ಗ್ರಾಮಗಳಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಯುಗಾದಿ ಉತ್ಸವ ಮಂಡ್ಯಕೊಪ್ಪಲು ಬಳಿಯ ಕಾವೇರಿ ಬೋರೇದೇವರ ದೇವಾಲಯ ಬಳಿ ಗುರುವಾರ ರಾತ್ರಿ ಆರಂಭವಾಯಿತು.

ಕಾವೇರಿ ನದಿ ತೀರದಲ್ಲಿ ದೇವರಿಗೆ ಹೂ ಹೊಂಬಾಳೆ ಮುಡಿಸಿ ಅಗ್ರ ಪೂಜೆ ಸಲ್ಲಿಸಿದ ಬಳಿಕ ಉತ್ಸವಕ್ಕೆ ಚಾಲನೆ ದೊರೆಯಿತು. ಬೋರೇದೇವರ ದೇಗುಲದ ಆವರಣದಲ್ಲಿ ಗುರುವಾರ ರಾತ್ರಿ ಮೆರವಣಿಗೆ ನಡೆಯಿತು. ಶುಕ್ರವಾರ ಬೆಳಿಗ್ಗೆ ಮಂಡ್ಯಕೊಪ್ಪಲು, ಚಿಂದೇಗೌಡನಕೊಪ್ಪಲು ಮತ್ತು ಗೊಬ್ಬರಗಾಲ ಗ್ರಾಮಗಳಲ್ಲಿ ದೇವರ ಕೂಟಗಳ ಉತ್ಸವ ಜರುಗಿತು. ದಾರಿಯುದ್ದಕ್ಕೂ ಪೂಜೆ, ಪುನಸ್ಕಾರಗಳು ನಡೆದವು. ದೂಪ, ಕರ್ಪೂರ, ಈಡುಗಾಯಿ ಸೇವೆಗಳು ಜರುಗಿದವು. ಮಧ್ಯಾಹ್ನದ ವೇಳೆಗೆ ದೇವರ ಕೂಟಗಳು ಹುಂಜನಕೆರೆ ಗ್ರಾಮಕ್ಕೆ ಆಗಮಿಸಿದವು.

ಹುಂಜನಕೆರೆ ಗ್ರಾಮದಲ್ಲಿ ಮೈಸೂರು ತಾಲ್ಲೂಕಿನ ಕಾಳಿಸಿದ್ದನಹುಂಡಿಯ ಬೀರೇಶ್ವರ, ಮಂಡ್ಯ ತಾಲ್ಲೂಕು ಉರಮಾರ ಕಸಲಗೆರೆ ಗ್ರಾಮದ ಉರಮಾರಮ್ಮ ಮತ್ತು ಬೀರೇಶ್ವರ, ಶ್ರೀರಂಗಪಟ್ಟಣ ತಾಲ್ಲೂಕು ಹೆಬ್ಬಾಡಿಹುಂಡಿ ಗ್ರಾಮದ ಬೀರೇಶ್ವರ, ಆಲಗೂಡು ಗ್ರಾಮದ ಸಿದ್ದೇಶ್ವರ ಮತ್ತು ಬೀರೇಶ್ವರ, ಹುಂಜನಕೆರೆ ಗ್ರಾಮದ ಚನ್ನೇಶ್ವರ, ಬಳ್ಳೇಕೆರೆಯ ಹುಚ್ಚೂರಾಯ ಮತ್ತು ಬಸವ ದೇವರ ಕೂಟಗಳು ಮೇಳೈಸಿವೆ.

ಈ ಹಿಂದೆ ಹುಂಜನಕೆರೆಯಲ್ಲಿ ನಡೆದ ಅಹಿತಕರ ಘಟನೆ ಕಾರಣದಿಂದಾಗಿ, ತಹಶೀಲ್ದಾರ್‌ ಚೇತನಾ ಯಾದವ್ ಶುಕ್ರವಾರ ಗ್ರಾಮಕ್ಕೆ ಭೇಟಿ ನೀಡಿದ್ದರು. ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು. ಶುಕ್ರವಾರ ರಾತ್ರಿ ಹೂ ಹೊಂಬಾಳೆ ಮುಡಿಸಿ ಶನಿವಾರ ಮುಂಜಾನೆವರೆಗೆ ಗ್ರಾಮದಲ್ಲಿ ಉತ್ಸವ ನಡೆಯಲಿದ್ದು, ಪರ (ಅನ್ನ ಸಂತರ್ಪಣೆ) ಮುಗಿಸಿ ಮಧ್ಯಾಹ್ನ ಆಲಗೂಡು ಗ್ರಾಮದತ್ತ ತೆರಳಲಿದೆ.

ಆಲಗೂಡು ಗ್ರಾಮದಲ್ಲಿ ಶನಿವಾರ ಸಂಜೆ ದೇವರ ಕೂಟಗಳಿಗೆ ಹೂ ಹೊಂಬಾಳೆ ಮುಡಿಸಿದ ಬಳಿಕ ಉತ್ಸವ ಆರಂಭವಾಗಲಿದೆ. ಇಡೀ ರಾತ್ರಿ ಮೆರವಣಿಗೆ ನಡೆಯಲಿದ್ದು, ಉತ್ಸವ ಮತ್ತಷ್ಟು ಕಳೆಗಟ್ಟಲಿದೆ. ಒಂಭತ್ತು ದೇವರ ಕೂಟಗಳ ಮನೆತನದ ಭಕ್ತರು ತಮ್ಮ ತಮ್ಮ ದೇವರ ಉತ್ಸವದ ಜತೆ ಹೆಜ್ಜೆ ಹಾಕುತ್ತಿದ್ದಾರೆ. ಭಾನುವಾರ ಮುಂಜಾನೆ ಆಲಗೂಡು ಗ್ರಾಮದಲ್ಲಿ ‘ದೊಡ್ಡ ಪರ’ (ಅನ್ನಸಂತರ್ಪಣೆ) ನಡೆಯಲಿದ್ದು, ಉಗಾದಿ ಉತ್ಸವಕ್ಕೆ ತೆರೆ ಬೀಳಿದೆ.

RELATED ARTICLES
- Advertisment -
Google search engine

Most Popular