ಉಳ್ಳಾಲ: ತೊಕ್ಕೊಟ್ಟು ಸಮೀಪದ ಕಲ್ಲಾಪು ಪಾರ್ದೆ ಕಟ್ಟೆಯಲ್ಲಿನ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ನಂದಕುಮಾರ್ (38) ಆತ್ಮಹತ್ಯೆಗೆ ಶರಣಾಗಿದ್ದು, ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲತಃ ನರಿಂಗಾನ ಗ್ರಾಮದ ಮೊಂಟೆಪದವಿನ ಮಠ ನಿವಾಸಿಯಾಗಿದ್ದ ನಂದಕುಮಾರ್ ತಂದೆ, ತಾಯಿಯನ್ನು ಅಗಲಿದ್ದ ಬಳಿಕ ಒಬ್ಬಂಟಿಯಾಗಿದ್ದರು. ಸಮಾರಂಭಗಳಿಗೆ ಲೈಟಿಂಗ್, ಮೈಕ್ ಅಳವಡಿಸುವ ವೃತ್ತಿ ನಡೆಸುತ್ತಿದ್ದರು. ಕಲ್ಲಾಪು ಪಾರ್ದೆಕಟ್ಟೆಯ ಡೆನ್ನಿಸ್ ಡಿ’ಸೋಜಾ ಅವರ ಮನೆಯ ಮಹಡಿಯ ಕೋಣೆಯೊಂದರಲ್ಲಿ ನಂದಕುಮಾರ್ ಒಬ್ಬಂಟಿಯಾಗಿ ವಾಸಿಸುತ್ತಿದ್ದರು.
ಡೆನ್ನಿಸ್ ಡಿ’ಸೋಜಾ ಅವರ ಕುಟುಂಬ ನಗರದಲ್ಲಿ ವಾಸಿಸುತ್ತಿದ್ದು ಶುಕ್ರವಾರ ಸಂಬಂಧಿಕರೊಬ್ಬರ ಅಂತ್ಯ ಕ್ರಿಯೆಗೆ ಬಂದಿದ್ದ ಡೆನ್ನಿಸ್ ಅವರು ಮಧ್ಯಾಹ್ನ ಮನೆಯ ಮಹಡಿಯ ಬಾಗಿಲು ತೆರೆದು ನೋಡಿದಾಗ ನಂದ ಕುಮಾರ್ ಕೊಠಡಿಯಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.