ಮಂಗಳೂರು (ದಕ್ಷಿಣ ಕನ್ನಡ):ಮಂಗಳೂರಿನ ಉಳ್ಳಾಲದಿಂದ ಮೀನುಗಾರಿಕೆಗೆ ತೆರಳಿ ವಾಪಸ್ ಆಗ್ತಿದ್ದ ಟ್ರಾಲ್ ಬೋಟೊಂದು ಸಮುದ್ರದಲ್ಲಿ ಕಲ್ಲೊಂದಕ್ಕೆ ಢಿಕ್ಕಿ ಹೊಡೆದು ಮುಳುಗಿದ ಘಟನೆ ಇಂದು ನಡೆದಿದೆ. ಈ ವೇಳೆ ಬೋಟ್ ನಲ್ಲಿದ್ದ ಆರು ಮಂದಿಯನ್ನು ಇತರ ಎರಡು ಬೋಟ್ ನವರು ರಕ್ಷಿಸಿದ್ದಾರೆ. ಮುಳುಗಡೆಯಾಗಿರುವ ಬೋಟ್ ನಲ್ಲಿ ಮೀನು, ಬಲೆ ಸಮುದ್ರ ಪಾಲಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೋಟ್ ಗೆ ಹಾನಿಯಾಗಿದೆ.

ದುರಂತಕ್ಕೀಡಾಗಿರುವ ಬೋಟ್ ಉಳ್ಳಾಲದ ನಯನಾ ಪಿ. ಸುವರ್ಣ ಎಂಬವರಿಗೆ ಸೇರಿದ್ದಾಗಿದೆ. ನಯನಾರ ಪತಿ ಪ್ರವೀಣ್ ಸುವರ್ಣ ಬೋಟ್ ಚಲಾಯಿಸುತ್ತಿದ್ದರೆ, ಉತ್ತರ ಪ್ರದೇಶ ಮೂಲದ ಮೀನುಗಾರರಾದ ಸಮರ ಬಹಾದ್ದೂರ್, ರಾಮ್ ಮನೋಜ್, ರೋಹಿತ್, ಪ್ರಕಾಶ ಮತ್ತು ವಾಸು ಎಂಬವರು ರಕ್ಷಿಸಲ್ಪಟ್ಟವರು.
ಪ್ರವೀಣ್ ಸುವರ್ಣ ಹಾಗೂ ಐವರು ಮೀನುಗಾರರು ಗುರುವಾರ ಸಂಜೆ ಮೀನುಗಾರಿಕೆಗೆ ತೆರಳಿದ್ದು, ಮೀನುಗಾರಿಕೆ ಮುಗಿಸಿ ಇಂದು ಮುಂಜಾನೆ ಉಳ್ಳಾಲ ಸಮುದ್ರ ತೀರದ ಮೂಲಕ ದಡಕ್ಕೆ ಆಗಮಿಸುತ್ತಿದ್ದರು.
ಈ ವೇಳೆ ಬೋಟ್ ನ ಪ್ರೊಫೈಲರ್ ಗೆ ಸಮುದ್ರದಲ್ಲಿ ಯಾವುದೋ ವಸ್ತು ತಾಗಿ ಅದು ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ನಿಂತಿದ್ದ ಬೋಟ್ ಸಮುದ್ರದ ತೆರೆಗಳ ಅಬ್ಬರಕ್ಕೆ ಸಿಲುಕಿ ಕಡಲ್ಕೊರೆತದ ಶಾಶ್ವತ ಕಾಮಗಾರಿಯಾದ ರೀಫ್ ಬಳಿ ಹಾಕಿದ್ದ ಸರ್ವೇ ಕಲ್ಲಿಗೆ ಬಡಿದಿದೆ. ಇದರಿಂದ ಹಾನಿಗೊಳಗಾದ ಬೋಟ್ ಮುಳುಗಿದೆ ಎಂದು ತಿಳಿದುಬಂದಿದೆ.