ಮಂಡ್ಯ: ಮಗುವಿಗೆ ಗರ್ಭದಿಂದಲೇ ಹಲವಾರು ಹಕ್ಕುಗಳು ದೊರೆಯುತ್ತದೆ. ಮಕ್ಕಳು ಸಮಾಜದಲ್ಲಿ ಬೆಳೆದು ಉತ್ತಮ ಪ್ರಜೆಯಾಗಲು ಯಾವುದೇ ತೊಂದರೆಯಾಗಬಾರದು ಎಂದು ಕಾನೂನು ಕಾಯ್ದೆಗಳನ್ನು ರೂಪಿಸಲಾಗಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಇ.ಎಸ್ ಇಂದಿರೇಶ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಬಾಲ್ಯ ವಿವಾಹ ನಿಷೇಧ ಕಾಯ್ದೆ – ೨೦೦೬ (ಕರ್ನಾಟಕ ತಿದ್ದುಪಡಿ) ಕಾಯ್ದೆ- ೨೦೧೬, ಮಕ್ಕಳ ಉಚಿತ ಮತ್ತು ಕಡ್ಡಿಯ ಶಿಕ್ಷಣ ಹಕ್ಕಿನ (ಆರ್.ಟಿ.ಇ) ಕಾಯ್ದೆ -೨೦೦೯, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ (ಪೋಕ್ಸೋ) ಕಾಯ್ದೆ- ೨೦೧೨, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ -೧೯೮೬, ಈ ನಾಲ್ಕು ಕಾಯ್ದೆಗಳು ಕಟ್ಟುನಿಟ್ಟಾಗಿ ಪಾಲನೆಯಾದರೆ ಮಕ್ಕಳು ಸುರಕ್ಷಿತವಾಗಿ ಬೆಳೆಯುತ್ತಾರೆ ಎಂದರು. ೧೭೭೪ ರಲ್ಲಿ ವಾರನ್ ಹೇಸ್ಟಿಂಗ್ ಅವರು ರೆಗುಲೇಷನ್ ಕಾಯ್ದೆ ಜಾರಿಗೆ ತಂದರು. ಇಲ್ಲಿಂದ ಮಕ್ಕಳ ಬಗ್ಗೆ ಚಿಂತನೆಗಳು ಪ್ರಾರಂಭವಾಯಿತು. ತದನಂತರ ೧೯೩೫ ರವರೆಗೆ ಮಕ್ಕಳ ರಕ್ಷಣೆಗಾಗಿ ೮ ರಿಂದ ೧೦ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದರು.

ಶಿವಕಾಶಿಯಲ್ಲಿ ದೀಪಾವಳಿ ಹಬ್ಬ ಹತ್ತಿರ ಬರುತ್ತಿದಂತೆ ಮಕ್ಕಳು ಶಾಲೆಗೆ ಬರುವುದನ್ನು ನಿಲ್ಲಿಸಿ ಪಾಟಕಿ ತಯಾರಿಕೆ ಕೆಲಸಕ್ಕೆ ಹೋಗುತ್ತಿದ್ದರು. ಕೋಲಕೊತ್ತದಲ್ಲಿ ಕಸೂತಿ ತಯಾರಿಕೆಗೆ ಸಣ್ಣ ಮಕ್ಕಳನ್ನು ತೊಡಗಿಸಿಕೊಳ್ಳುತ್ತಿದ್ದರು ಇದನ್ನು ತಡೆಗಟ್ಟಲು ಸುಪ್ರೀಂ ಕೊರ್ಟ್ ಕಾಳಜಿ ವಹಿಸಿ ಬಾಲ ಕಾರ್ಮಿಕ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರು ಎಂದರು. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಶಿಕ್ಷಣದಿಂದ ಮಕ್ಕಳು ಸಂಸ್ಕಾರ ಬೆಳೆಯುತ್ತದೆ. ಸಂಸ್ಕಾರ ಇದ್ದ ಕಡೆ ಶೋಷಣೆಗಳು ಇರುವುದಿಲ್ಲ ಎಂದರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನಾಗಣ್ಣಗೌಡ ಕೆ. ಅವರು ಮಾತನಾಡಿ ಮಕ್ಕಳನ್ನು ಬಲಿಕೊಟ್ಟು ಯಾವ ದೇಶಕಟ್ಟಲು ಸಾಧ್ಯವಿಲ್ಲ. ರಾಷ್ಟ್ರ ಕಟ್ಟಬೇಕಾದರೆ ಮಕ್ಕಳು, ಪರಿಸರ ಮತ್ತು ನೀರು ಇವುಗಳು ಅತ್ಯವಶ್ಯ. ಹಾಗಾಗಿ ಸಾರ್ವಜನಿಕರು, ಅಧಿಕಾರಿಗಳು ಇವುಗಳ ಮೇಲೆ ವಿಶೇಷ ಕಾಳಜಿವಹಿಸಲಿ ಎಂದರು.
ಹೆಣ್ಣು ಭ್ರೂಣಹತ್ಯೆ ಹಾಗೂ ಬಾಲ್ಯವಿವಾಹಗಳು ಸಮಾಜ ಘಾತುಕ ಕೆಲಸಗಳು. ಅಧಿಕಾರಿಗಳು ಅಂತಹವ ವಿರುದ್ಧ ಮುಲಾಜಿಲ್ಲದೇ ಪ್ರಕರಣ ದಾಖಲಿಸಿ. ಜೊತೆಗೆ ಬಾಲ್ಯವಿವಾಹಗಳು ನಡೆಯದೆ ಇರುವ ಆಗೆ ಜಿಲ್ಲೆ, ತಾಲೂಕು ಮತ್ತು ಗ್ರಾಮಮಟ್ಟದಲ್ಲಿ ಅರಿವು ಮೂಡಿಸಿ. ಗ್ರಾಮ ಮಟ್ಟದಲ್ಲಿ ಗ್ರಾಮಲೆಕ್ಕಧಿಕಾರಿ, ಪಿಡಿಒ ವಿಶೇಷವಾಗಿ ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಗೆ ಒಂದುವಾರ ಹೆಣ್ಣು ಮಗು ಬರಲಿಲ್ಲ ಎಂದರೆ, ಅಂತಹವರನ್ನು ಹುಡುಕಿ ಕಾರಣ ಕೇಳಿ ಶಾಲೆಗೆ ಕರೆತನ್ನಿ, ಇಂತಹ ಸಂಧರ್ಭದಲ್ಲಿ ಬಾಲ್ಯವಿವಾಹ ಮಾಡುವುದಕ್ಕೆ ಸಜ್ಜಾಗಿದ್ದಿರೆ ಪೋಷಕರಿಗೆ ತಿಳಿ ಹೇಳಿ, ಆ ಹೆಣ್ಣು ಮಗುವಿಗೆ ವಿಶೇಷ ಕೌನ್ಸಿಲ್ ನೀಡಿ ಉನ್ನತ ಶಿಕ್ಷಣಕ್ಕೆ ದಾರಿಮಾಡಿಕೊಡಿ ಎಂದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸತ್ರ ನ್ಯಾಯಾಧೀಶರಾದ ಜೈಶಂಕರ್ ಅವರು ಮಾತನಾಡಿ ಬಾಲ್ಯವಿವಾಹ ತಡೆಗಟ್ಟವುದು ಹಾಗೂ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸುವುದು ಮಕ್ಕಳ ಲೈಂಗಿಕ ದೌರ್ಜನ್ಯ ತಡೆಗಟ್ಟುವುದು ಮತ್ತು ಬಾಲ ಕಾರ್ಮಿಕರನ್ನು ತಡೆಗಟ್ಟುವುದು ಇಂತಹ ಹಲವಾರು ಕಾರ್ಯಕ್ರಮವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡು ಬಂದು ಹಲವಾರು ಮಕ್ಕಳನ್ನು ರಕ್ಷಣೆ ಮಾಡಿದ್ದೇವೆ ಎಂದರು.
ಬಾಲ್ಯವಿವಾಹ ಹಾಗೂ ಬಾಲ ಕಾರ್ಮಿಕರ ಮಕ್ಕಳ ಮುಂದಿನ ಭವಿಷ್ಯ ಸರಿಪಡಿಸುವುದು ಕಾನೂನಿನ ಕರ್ತವ್ಯ. ಅತಿಮುಖ್ಯವಾಗಿ ಮಕ್ಕಳಲ್ಲಿ ಇಂತಹ ಚಟುವಟಿಕೆಯಿಂದ ತಡೆಗಟ್ಟಲು ಪ್ರತಿ ಹಳ್ಳಿಗಳಲ್ಲಿಯೂ ಅರಿವು ಮೂಡಿಸುವ ಕೆಲಸವಾಗಬೇಕು. ಈ ಮೂಲಕ ಜಿಲ್ಲೆಯಲ್ಲಿ ಮಾದರಿ ಜಿಲ್ಲೆಯನ್ನಾಗಿ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಉಚ್ಚ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗಣಪತಿ ಪ್ರಶಾಂತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ವಾಣಿ.ಎ ಶೇಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್, ಪೊಲೀಸ್ ವರಿಷ್ಠಾಧಿಕಾರಿ ಎನ್. ಯತೀಶ್, ರಾಜ್ಯ ಮಕ್ಕಳ ಆಯೋಗದ ಸದಸ್ಯರಾದ ವೆಂಕಟೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ರಾಜಮೂರ್ತಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.