ಯಳಂದೂರು: ತಾಲೂಕಿನ ಬೂದಿತಿಟ್ಟು ಗ್ರಾಮದಲ್ಲಿ ಬಿ.ಜಿ. ಮಹೇಶ್ ಎಂಬವರು ಅನಧಿಕೃತವಾಗಿ ಶೌಚಗೃಹದ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಪರವಾನಿಗೆಯನ್ನೂ ಪಡೆದಿಲ್ಲ ಎಂದು ಆರೋಪಿಸಿ ಗ್ರಾಮದ ವಿಶೇಷಚೇತನ ವ್ಯಕ್ತಿ ಬಸವಣ್ಣ ಎಂಬುವವರು ಮದ್ದೂರು ಗ್ರಾಮ ಪಂಚಾಯಿತಿಯ ಮುಂಭಾಗ ಮಂಗಳವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಗ್ರಾಮದ ಲಿಂಗಾಯಿತರ ಬಡಾವಣೆಯಲ್ಲಿ ಬಿ.ಜಿ. ಮಹೇಶ್ ಎಂಬುವರು ಅಸೆಸ್‌ಮೆಂಟ್ ಸಂಖ್ಯೆ ೧೧೬/೨ ರಲ್ಲಿ ಅನಧಿಕೃತವಾಗಿ ಶೌಚಗೃಹ ನಿರ್ಮಾಣ ಮಾಡುತ್ತಿದ್ದರು. ಆದರೆ ಇಲ್ಲಿ ಅವರು ಅಕ್ಕಪಕ್ಕದಲ್ಲಿ ಸ್ಥಳವನ್ನು ಬಿಡದೆ ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೆ ಪಂಚಾಯಿತಿಯಿಂದ ಇದಕ್ಕೆ ಪರವಾನಿಗೆಯನ್ನೂ ಪಡೆದಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿಗೆ ಬಾರಿ ದೂರು ಸಲ್ಲಿಸಲಾಗಿತ್ತು. ಆದರೆ ಪಿಡಿಒ ಇವರ ವಿರುದ್ಧ ಯಾವುದೇ ಕ್ರಮ ವಹಿಸಿರಲಿಲ್ಲ. ಈಗಾಗಲೇ ಕಟ್ಟಡ ನಿರ್ಮಾಣ ಬಹುತೇಕ ಮುಗಿಯುತ್ತಾ ಬಂದಿದೆ ಎಂದು ಇವರು ಪ್ರತಿಭಟನೆ ನಡೆಸಿದರು.
ಘಟನಾ ಸ್ಥಳಕ್ಕೆ ನರೇಗಾ ಸಹಾಯಕ ನಿರ್ದೇಶಕ ಕೆ.ಎಂ. ರವೀಂದ್ರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಕೂಡಲೇ ಈ ಕಟ್ಟಡದ ಸುತ್ತ ಇರುವರಿಗೆ ನೋಟೀಸ್ ನೀಡಿ ಅಳತೆಯನ್ನು ಮಾಡಿ ಇದು ಅನಧಿಕೃತ ಎಂದು ಕಂಡುಬಂದಲ್ಲಿ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಈ ಕೆಲಸವನ್ನು ವಾರದೊಳಗೆ ಪೂರ್ಣಗೊಳಿಸಬೇಕು ಎಂದು ಪಿಡಿಒ ನಟರಾಜುಗೆ ಸೂಚನೆ ನೀಡಿದರು.