ಬೆಂಗಳೂರು : ಭ್ರೂಣಲಿಂಗ ಪತ್ತೆ, ಹತ್ಯೆ ಕಾನೂನು ಬಾಹಿರ ಎಂದು ಕಾನೂನು ಇದ್ದರೂ ಹೇಯ ಕೃತ್ಯ ಮುಂದುವರಿದಿದೆ. ಮೈಸೂರು, ಮಂಡ್ಯ ಬಳಿಕ ಇದೀಗ ಬೆಂಗಳೂರಿನಲ್ಲಿಯೂ ಭ್ರೂಣ ಪತ್ತೆಯ ಜಾಲ ಬೆಳಕಿಗೆ ಬಂದಿದೆ.
ವಿಜಯನಗರದ ತನ್ಮಯಿ ಆಸ್ಪತ್ರೆಯಲ್ಲಿ ಅನಧಿಕೃತ ಸ್ಕ್ಯಾನಿಂಗ್ ಮಿಷಿನ್ ಪತ್ತೆಯಾಗಿದ್ದು, ಭ್ರೂಣ ಪತ್ತೆಯ ಬಗ್ಗೆ ಆರೋಗ್ಯ ಇಲಾಖೆ ಶಂಕೆ ವ್ಯಕ್ತಪಡಿಸಿ ರೇಡ್ ನಡೆಸಿದೆ. ಇನ್ನು ಸ್ಕ್ಯಾನಿಂಗ್ ರೂಮ್‌ಗೆ ಬೀಗ ಹಾಕಲಾಗಿದೆ. ಈಗಾಗಲೇ ಮಂಡ್ಯ ಸೇರಿದಂತೆ ನೆರೆ ರಾಜ್ಯದಲ್ಲಿ ಭ್ರೂಣ ಪತ್ತೆಯ ಜಾಲ ಭೇದಿಸಿರುವ ಆರೋಗ್ಯ ಇಲಾಖೆ ಮಗದೊಂದು ಮೆಗಾ ಅಪರೇಷನ್ ನಡೆಸಿದೆ.
ಈ ಘಟನೆ ಸಂಬಂಧ ಆರೋಗ್ಯ ಇಲಾಖೆಯ ವೈದ್ಯಕೀಯ ಕಾಯ್ದೆ ಉಪನಿರ್ದೇಶಕ ಡಾ.ವಿವೇಕ್ ದೊರೈ ಮಾತನಾಡಿದ್ದಾರೆ. ಕೆಪಿಎಂಎ ಅಡಿಯಲ್ಲಿ ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಹೊಂದಿಲ್ಲ ಅಂತ ದೂರು ಬಂದಿತ್ತು. ಈ ಹಿನ್ನೆಲೆ ಆಸ್ಪತ್ರೆ ಮೇಲೆ ದಾಳಿ ಮಾಡಲಾಗಿತ್ತು. ಇಲ್ಲಿಗೆ ಬಂದಾಗ ಅನಧಿಕೃತವಾಗಿ ಸ್ಕ್ಯಾನಿಂಗ್ ಮಿಷನ್ ಇರೋದು ಪತ್ತೆಯಾಗಿದೆ.
ಅಲ್ಲದೇ ಇವರಿಗೆ ಯಾವುದೇ ರೀತಿಯ ಲೈಸೆನ್ಸ್ ಇರಲಿಲ್ಲ. ನಾಲ್ಕು ವರ್ಷದಿಂದ ನಮ್ಮ ಬಳಿ ಇದೆ. ತಿಂಗಳಿಗೆ 7 ರಿಂದ 8 ಕೇಸ್ ಮಾಡ್ತಿದ್ವಿ ಅಂತ ಅವರೇ ಹೇಳ್ತಾ ಇದ್ದಾರೆ. ಅದರ ಬಗ್ಗೆ ರಿಪೋರ್ಟ್, ಇಮೇಜ್ ಕೂಡ ಇಲ್ಲ. ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ ಅಂತ ತಿಳಿಸಿದ್ದಾರೆ.



