ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಅನೈತಿಕ ಪೊಲೀಸ್ ಗಿರಿ ಪ್ರಕರಣ ಬೆಳಕಿಗೆ ಬಂದಿದೆ.
ಕಾನೂನನ್ನು ಕೈಗೆತ್ತಿಕೊಂಡ್ರೆ ಕಠಿಣ ಶಿಕ್ಷೆ ನೀಡಲಾಗುತ್ತದೆ ಎಂದು ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಲ್ಲಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಧರ್ಮಸ್ಥಳ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣಕ್ಕೆ ಬಾಡಿಗೆಗೆ ಹೋಗಿದ್ದ ಉಜಿರೆಯ ಆಟೋ ರಿಕ್ಷಾ ಚಾಲಕನಿಗೆ ತಂಡವೊಂದು ತೀವ್ರ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಉಜಿರ ಹಳೆ ಪೇಟೆ ನಿವಾಸಿ ಮುಹಮ್ಮದ್ ಆಶಿಕ್ ಹಲ್ಲೆಗೊಳಗಾದ ಯುವಕ. ಆಶಿಕ್ ತನ್ನ ಆಟೋದಲ್ಲಿ ರಾತ್ರಿ ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಬಾಡಿಗೆ ಹೋಗಿ ಹಿಂದಿರುಗುತ್ತಿದ್ದ ವೇಳೆ ಈ ಹಲ್ಲೆ ನಡೆದಿದೆ.
ನಾಲ್ವರ ತಂಡವೊಂದು ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪವೇ ರಿಕ್ಷಾವನ್ನು ತಡೆದು ಆಶಿಕ್ ಮೇಳೆ ಯದ್ವಾತದ್ವಾ ಹಲ್ಲೆ ಮಾಡಿದೆ. ಮಾರಣಾಂತಿಕ ಹಲ್ಲೆಗೊಳಗಾದ ಮುಹಮ್ಮದ್ ಆಶಿಕ್ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.