ಬೆಂಗಳೂರು: ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿದ್ದ ಬಿಜೆಪಿ-ಜೆಡಿಎಸ್ ನಾಯಕರ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ದಿಢೀರನೆ ಮೂಗಿನಿಂದ ರಕ್ತಸ್ರಾವ ಉಂಟಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್‌ಡಿಕೆಗೆ ರಕ್ತಸ್ರಾವ ಉಂಟಾಗಲು ಕಾರಣ ಏನು ಎಂಬುದು ಆಪ್ತ ಮೂಲಗಳಿಂದ ತಿಳಿದುಬಂದಿದೆ.
ಹೌದು. ಕುಮಾರಸ್ವಾಮಿ ಅವರಿಗೆ ಹೃದಯ ಸಂಬಂಧಿ ಕಾಯಿಲೆ ಇರುವುದರಿಂದ ಅವರು ಬ್ಲಡ್ ಥಿನ್ನರ್ ಔಷಧಿ ತೆಗೆದುಕೊಳ್ಳುತ್ತಿದ್ದರು. ಬ್ಲಡ್ ಥಿನ್ನರ್‌ನಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಿದೆಯಾ? ಅಥವಾ ನಿಖರ ಕಾರಣ ಏನು ಎಂಬುದನ್ನು ವೈದ್ಯರು ಸದ್ಯದಲ್ಲೇ ತಿಳಿಸಲಿದ್ದಾರೆ ಎಂದು ಹೆಚ್‌ಡಿಕೆ ಆಪ್ತರು ತಿಳಿಸಿದ್ದಾರೆ.
ಸದ್ಯ ಹೆಚ್‌ಡಿಕೆ ಅವರನ್ನ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಏನಿದು ಬ್ಲಡ್ ಥಿನ್ನರ್?
ಬ್ಲಡ್ ಥಿನ್ನರ್ ಎಂಬುದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಔಷಧಿಯಾಗಿದೆ. ಮನುಷ್ಯನ ದೇಹದಲ್ಲಿ ರಕ್ತವನ್ನು ತೆಳುವಾಗಿಸುವುದಕ್ಕೆ ಈ ಔಷಧವನ್ನು ಬಳಸುತ್ತಾರೆ. ಬ್ಲಡ್ ಥಿನ್ನರ್ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆದು ಹೃದಯಾಘಾತ, ಪಾರ್ಶ್ವವಾಯು ಮೊದಲಾದ ಅಪಾಯವನ್ನುಂಟುಮಾಡದಂತೆ ತಡೆಯುತ್ತದೆ. ವೈದ್ಯರ ಸಲಹೆ ಮೇರೆಗೆ ಮಾತ್ರವೇ ಇದನ್ನು ಬಳಸಬಹುದಾಗಿದೆ. ವೈದ್ಯರ ಸಲಹೆ ಇಲ್ಲದೆಯೇ ಈ ಔಷಧ ಸೇವಿಸಿದರೆ, ರಕ್ತಸ್ರಾವದಂತ ಅಡ್ಡಪರಿಣಾಮಗಳು ಉಂಟಾಗುತ್ತವೆ ಎಂದು ಸಂಬಂಧಪಟ್ಟ ವೈದ್ಯರು ಹೇಳಿದ್ದಾರೆ.
ಕುಮಾರಸ್ವಾಮಿ ಅವರು 2024ರ ಲೋಕಸಭಾ ಚುನಾವಣೆಗೂ ಮುನ್ನ ಮಾರ್ಚ್‌ನಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಾಲಿನ ರಕ್ತನಾಳದ ಮೂಲಕ ಹೃದಯ ಕವಾಟ ಬದಲಾವಣೆ ಎಂದು ಡಾ.ಸಿ.ಎನ್ ಮಂಜುನಾಥ್ ತಿಳಿಸಿದ್ದರು. ಅದಕ್ಕೂ ಮುನ್ನ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು.