ಮಂಡ್ಯ: ಸರ್ವ ಪಕ್ಷಗಳ ಸಭೆಗೆ ಕೇಂದ್ರ ಸಚಿವ ಹೆಚ್ ಡಿಕೆ ಗೈರು ಹಿನ್ನಲೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಡೆಗೆ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರು ಸುದ್ದಿಗೋಷ್ಟಿ ನಡೆಸಿದ್ದು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿಡಿ ಗಂಗಾಧರ್ ಮಾತನಾಡಿ, ಕಾವೇರಿ ಪ್ರಾಧಿಕಾರದ ತೀರ್ಪು ಕುರಿತು ಸಂಸದರು ಮಧ್ಯ ಪ್ರವೇಶ ಮಾಡಬೇಕು. ಕೇಂದ್ರ ಸಚಿವ ಕುಮಾರಸ್ವಾಮಿ ಗಂಭೀರತೆ ತೋರದೆ ಕಾವೇರಿ ಕೊಳ್ಳದ ರೈತರಿಗೆ ನೋವುಂಟು ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕರೆದ ಸರ್ವ ಪಕ್ಷಗಳ ಸಭೆಗೆ ಗೈರಾಗಿದ್ದಾರೆ. ಸಭೆಗಿಂತ ಪಾಂಡವಪುರದಲ್ಲಿ ದೊಡ್ಡ ಕಾರ್ಯಕ್ರಮದಲ್ಲಿ ಬಿಜಿಯಾಗಿದ್ದರು ಎಂದು ಕಿಡಿಕಾರಿದರು.
ಉದಾಸೀನವಾಗಿ ಕಾವೇರಿ ವಿಚಾರ ಮಾತನಾಡಬೇಡಿ. ಸರ್ವ ಪಕ್ಷಗಳ ಸಭೆಗೆ ಗೈರಾಗುವುದನ್ನ ಬಿಟ್ಟು ಭಾಗವಹಿಸಿ. ನಿಮ್ಮ ಪ್ರಭಾವ ಬಳಸಿ ಕಾವೇರಿ ವಿಚಾರದಲ್ಲಿ ಧ್ವನಿ ಎತ್ತಿ ಸಮಸ್ಯೆ ಬಗಿಹರಿಸಿ. ಉಡಾಫೆ ಉತ್ತರಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ಕೊಡ್ತಾರೆ ಎಂದು ಆಕ್ರೋಶ ಹೊರಹಾಕಿದರು.
ಸುದ್ದಿಗೋಷ್ಟಿಯಲ್ಲಿ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಸರ್ವ ಪಕ್ಷಗಳ ಸಭೆಗೆ ಕುಮಾರಸ್ವಾಮಿ ಗೈರಾಗಿದ್ದಾರೆ. ಪಾಂಡವಪುರದಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಸಭೆಯಲ್ಲಿ ಎಲ್ಲರು ಕುಮಾರಸ್ವಾಮಿಗೆ ಕಾಯುತ್ತಿದ್ದರು. ಆದರೂ ಸಹ ಉಡಾಫೆಯಿಂದ ಗೈರಾಗಿದ್ದಾರೆ. ಜಿಲ್ಲೆಯ ಜನ ಆಶೀರ್ವಾದ ಮಾಡಿದ್ರೆ ಕಾವೇರಿ ಸಮಸ್ಯೆ ಬಗೆಹರಿಸುವ ಮಾತು ಕೊಟ್ಟಿದ್ರು. ಜಿಲ್ಲೆಯ ಜನ ಹೆಚ್ಡಿಕೆಯನ್ನ ಗೆಲ್ಲಿಸಿ ಕೊಟ್ಟಿದ್ದಾರೆ. ನೀವು ಈ ರೀತಿಯ ನಡೆದುಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.
ದೇವೇಗೌಡ್ರು ಆರೋಗ್ಯ ಸರಿ ಇದ್ದರೆ ಸಭೆಯಲ್ಲಿ ಭಾಗಿಯಾಗಿ ಸಲಹೆ ಕೊಡ್ತಿದ್ರು. ಪ್ರಧಾನಿಗೆ ತಮ್ಮ ಮಗನ ಮೂಲಕ ಕಾವೇರಿ ಸಮಸ್ಯೆಗೆ ಇತ್ಯರ್ಥ ಮಾಡಬೇಕು. ತಂದೆ-ಮಗ ಸೇರಿ ಈ ಸಮಸ್ಯೆಗಳನ್ನು ಬಗೆಹರಿಸಿ. ಮೋದಿ ಕರ್ನಾಟಕಕ್ಕೆ ಬಂದಾಗ ಬಿಜೆಪಿ ನಾಯಕರನ್ನ ಮಾತನಾಡಿಸಿಲ್ಲ ಎಂದು ಹೇಳಿದರು.