ಸುತ್ತೂರು: ಶ್ರೀ ಶ್ರೀ ಶ್ರೀ ದೇಶೀಕೇಂದ್ರ ಮಹಾಸ್ವಾಮೀಜಿಗಳ ಧಾರ್ಮಿಕ ಸಾಮಾಜಿಕ, ಶೈಕ್ಷಣಿಕ ಸೇವೆಯು ಎಲ್ಲರನ್ನೂ ಒಳಗೊಳ್ಳುವಂಥದ್ದಾಗಿದೆ. ಅದು, ಇಂದಿಗೂ, ಎಂದಿಗೂ, ಎಂದೆಂದಿಗೂ ಅಭಿನಂದನಾರ್ಹ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಅವರು ಅಭಿಪ್ರಾಯ ಪಟ್ಟರು.
ಸುತ್ತೂರು ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಎಲ್ಲರನ್ನು ಅಪ್ಪಿಕೊಳ್ಳುವ, ಒಪ್ಪಿಕೊಳ್ಳುವ, ಕೈ ಹಿಡಿದು ನಡೆಸುವಂತಹ, ಅವರಿಗೊಂದು ಮಾರ್ಗದರ್ಶನ ಮಾಡಿ, ದಡ ಮುಟ್ಟಿಸುವವರೆಗೆ ನಮ್ಮ ಸುತ್ತೂರು ಶ್ರೀಗಳು ಸೇವೆಯನ್ನು ಒದಗಿಸಿದ್ದಾರೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ತಿಳಿಸಿದರು.
ಮಠ-ಮಂದಿರಗಳ ಶೈಕ್ಷಣಿಕ, ಸಾಮಾಜಿಕ ಧಾರ್ಮಿಕ ಸೇವೆ ಅನನ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ಶೈಕ್ಷಣಿಕ ಸೇವೆಯನ್ನು ಸರ್ಕಾರಕ್ಕೆ ಸಮನಾಗಿ ಮಠ, ಮಂದಿರಗಳು ಒದಗಿಸುತ್ತಿವೆ.
ನಮ್ಮ ರಾಜ್ಯದಲ್ಲಿ ಮಠ ಮಂದಿರಗಳು ಶೈಕ್ಷಣಿಕ ಸೇವೆ ಒದಗಿಸದೇ ಇದ್ದಿದ್ದರೆ, ನಾವು ಈ ಹೊತ್ತಿಗೆ ಇಷ್ಟು ಅಕ್ಷರಸ್ಥರನ್ನು ಕಾಣಲು ಸಾಧ್ಯವಾಗುತ್ತಿರಲಿಲ್ಲ. ಮಠ ಮಂದಿರಗಳ ಈ ಸೇವೆಗೆ ಯಾವುದೇ ಸರ್ಕಾರವಿದ್ದರೂ ಯಾವತ್ತೂ ಚಿರ ಋಣಿಯಾಗಿರುತ್ತದೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಹೇಳಿದರು.
ಅದರಲ್ಲೂ ನಮ್ಮ ಸುತ್ತೂರು ಮಠದ ಸೇವೆಯು ಮೈಸೂರು ಪ್ರಾಂತ್ಯಕ್ಕೆ ಸೀಮಿತವಾಗಿಲ್ಲ. ದೇಶ, ವಿದೇಶಗಳಲ್ಲಿ ಅದರ ಖ್ಯಾತಿ ಹರಡಿದೆ. ಆಲದ ಮರದಂತೆ ದೇಶ, ವಿದೇಶಗಳಲ್ಲಿ ಸುತ್ತೂರು ಮಠ ತನ್ನ ಶಾಖೆಗಳನ್ನು ಪ್ರಾರಂಭಿಸಿ, ಆಧ್ಯಾತ್ಮಿಕ, ಧಾರ್ಮಿಕ ಹಾಗೂ ನಮ್ಮದೇಶದ ಸಂಸ್ಕೃತಿಯ ಮಹತ್ವವನ್ನು ಪಸರಿಸುತ್ತಿದೆ. ಇವರ ಸೇವೆಗೆ ನಾವು ಯಾವತ್ತೂ ಚಿರಋಣಿಯಾಗಿರಬೇಕು ಎಂದು ಶಾಸಕರಾದ ದಿನೇಶ್ ಗೂಳಿಗೌಡ ಹೇಳಿದರು.
ಬಸವ ತತ್ವಗಳ ಪ್ರತಿಪಾದನೆ ಮಾಡುತ್ತ “ಇವನ್ಯಾರವ ಇವನ್ಯಾರವ ಇವನ್ಯಾರವ ಎನ್ನುವುದಕ್ಕಿಂತ ಇವ ನಮ್ಮವ.. ಇವ ನಮ್ಮವ.. ಇವ ನಮ್ಮವ” ಎಂದು ಎಲ್ಲರನ್ನೂ ಅಪ್ಪಿಕೊಂಡು, ಒಪ್ಪಿಕೊಂಡು ಒಂದು ವೈಚಾರಿಕ ನೆಲಗಟ್ಟಿನಲ್ಲಿ ನಡೆಯುತ್ತಿರುವ ಮಹಾಸಂಸ್ಥಾನ ಇದಾಗಿದೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಹೇಳಿದರು.
ಈ ಸಂಸ್ಥಾನವು ನಮ್ಮ ಭಾಗದಲ್ಲಿದೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೆ ನಾನು ಮಠದ ಸಮರಂಭಕ್ಕೆ ಅತಿಥಿಯಾಗಿ ಆಗಮಿಸಿರುವುದು ನನ್ನ ಪಾಲಿನ ಪುಣ್ಯವಾಗಿದೆ. ಇಲ್ಲೂ ಕೂಡ ತ್ರಿವಿಧ ದಾಸೋಹ ನಡೆಯುತ್ತದೆ. ಅಕ್ಷರ – ಅನ್ನ -ವಸತಿಯನ್ನು ಇಲ್ಲಿ ನೀಡಲಾಗುತ್ತಿದೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಕಲಿತು ಸಾರ್ಥಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇಂಥ ಒಂದು ಪರಂಪರೆ ಉಳ್ಳ ಪರಮ ಪುಣ್ಯ ಮಠವು ನಮ್ಮ ಭಾಗದಲ್ಲಿರುವುದು ನಮ್ಮ ಪುಣ್ಯವಾಗಿದೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ಹೇಳಿದರು.
ನಾವು ನಮ್ಮ ಬಾಲ್ಯದ ದಿನಗಳಲ್ಲಿ ಸುತ್ತೂರು ಮಠಕ್ಕೆ ಇಲ್ಲಿನ ಜಾತ್ರೆಗೆ ಬಂದು ಸಂಭ್ರಮಿಸುತಿದ್ದೆವು. ಇಂದು ನಾನು ಈ ವೇದಿಕೆಗೆ ಬಂದು ಮಾತನಾಡುತ್ತಿದ್ದೇನೆ. ಇಲ್ಲಿಗೆ ಬರಲು ನನಗೊಂದು ಅವಕಾಶ ಸಿಕ್ಕಿದೆ ಎಂದರೆ ಅದು ಸುತ್ತೂರು ಶ್ರೀಗಳ ಪ್ರಸಾದ, ಪುಣ್ಯಾಶೀರ್ವಾದವಾಗಿದೆ ಎಂದು ಶಾಸಕರಾದ ದಿನೇಶ್ ಗೂಳಿಗೌಡ ತಿಳಿಸಿದರು.