ಮೈಸೂರು: ನಮ್ಮ ರಾಷ್ಟ್ರ ಕಂಡ ಅಪ್ರತಿಮ ಸ್ವಾತಂತ್ರ್ಯ ಸೇನಾನಿ ದೇಶ ಭಕ್ತ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಆಶಯದಂತೆ ರಾಷ್ಟ್ರೀಯ ಏಕತೆ, ಐಕ್ಯತೆ, ಭಾವೈಕ್ಯತೆ, ಸಮಗ್ರತೆ , ಸೌಹಾರ್ದತೆ ಪ್ರತಿಯೊಬ್ಬ ಭಾರತೀಯರ ಎದೆಯಾಳದ ಉಸಿರಾಗಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗ ಸಂಯುಕ್ತವಾಗಿ ನಗರದ ಕೆ.ಆರ್.ಮೊಹಲ್ಲಾದ ಅಗ್ರಹಾರದ ತ್ಯಾಗರಾಜ ರಸ್ತೆಯ ಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಭಾರತದ ಅಪ್ರತಿಮ ಸ್ವಾತಂತ್ರ್ಯ ಯೋಧ ಸರ್ದಾರ್ ವಲ್ಲಭ ಭಾಯ್ ಪಟೇಲ್ ಜಯಂತಿಯ ದ್ಯೋತಕವಾಗಿ ಆಯೋಜಿಸಿದ್ದ ರಾಷ್ಟ್ರೀಯ ಏಕತಾ ದಿನವನ್ನು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರದ ಏಕತೆಯನ್ನು ತಮ್ಮ ಬದುಕಿನ ಧ್ಯೇಯ ವಾಕ್ಯ ಮಾಡಿಕೊಂಡಿದ್ದ ಉಕ್ಕಿನ ಮನುಷ್ಯ ಸರ್ದಾರ್ ಪಟೇಲರು ಸ್ವಾತಂತ್ರ್ಯ ಬಂದ ಕಾಲಘಟ್ಟದಲ್ಲಿ ದೇಶದಲ್ಲಿದ್ದ ಚಿಕ್ಕದು, ದೊಡ್ಡದು, ಪುಟ್ಟದು ಎನ್ನದೆ ಎಲ್ಲಾ ಸಂಸ್ಥಾನಗಳನ್ನು ಎಲ್ಲಿಯೂ ಚದುರಿ ಹೋಗದಂತೆ ಭಾರತದಲ್ಲಿ ಉಳಿಯುವಂತೆ ಮಾಡಿ ಒಕ್ಕೂಟದ ವ್ಯವಸ್ಥೆಯಲ್ಲಿ ಸ್ವತಂತ್ರ ಭಾರತವನ್ನು ಸುಭದ್ರವಾಗಿ ಕಟ್ಟಿದವರೆಂದರು.
ಪ್ರತಿವರ್ಷ ಅಕ್ಟೋಬರ್ ೩೧ರಂದು ರಾಷ್ಟ್ರೀಯ ಏಕತಾ ದಿವಸ್ ಅಥವಾ ರಾಷ್ಟ್ರೀಯ ಐಕ್ಯತಾ ದಿನ ಎಂದು ದೇಶದಲ್ಲಿ ಆಚರಿಸಲಾಗುತ್ತದೆ. ಅಖಂಡ ಭಾರತದ ಒಗ್ಗೂಡಿವಿಕೆಗೆ ಕಾರಣೀಭೂತರಾದ ಭಾರತದ ಸ್ವಾತಂತ್ರ್ಯ ಚರಿತ್ರೆಯಲ್ಲಿನ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮ ಶತಾಬ್ದಿಯ ನೆನಪಿಗಾಗಿ ಈ ಆಚರಣೆಯನ್ನು ೨೦೧೪ ರಿಂದ ಭಾರತ ಸರ್ಕಾರ ಆರಂಭಿಸಿದೆ. ಬ್ರಿಟಿಷರನ್ನು ಭಾರತದಿಂದ ತೊಲಗಿಸುವಲ್ಲಿ ಬಹು ಮುಖ್ಯ ಪಾತ್ರವಹಿಸಿದ ನಾಯಕರ ಸಾಲಿನಲ್ಲಿ ಅಗ್ರ ಪಂಕ್ತಿ ಯಲ್ಲಿ ನಿಲ್ಲುವ ಹೆಸರೇ ಸರ್ದಾರ್ ಪಟೇಲ್. ೧೯೨೮ರ ಬಾರ್ಡೋಲಿ ಸತ್ಯಾಗ್ರಹದಲ್ಲಿ ಪಟೇಲರು ತೋರಿದ ಅಸಾಧಾರಣ ಧೈರ್ಯ ಮತ್ತು ಜಾಕಚಕ್ಯತೆಗೆ ಮಾರುಹೋದ ಅಲ್ಲಿನ ಮಹಿಳೆಯರು ಅವರಿಗೆ ಸರ್ದಾರ ಎಂಬ ಬಿರುದನ್ನು ನೀಡಿದ್ದರು.
ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ಅಖಂಡ ಭಾರತದ ಕನಸನ್ನು ಕಂಡು ತುಂಡು ತುಂಡಾಗಿದ್ದ ಭಾರತದ ಭಾಗಗಳನ್ನು ಒಗ್ಗೂಡಿಸಿ ಎರಡು ಮೂರು ಸಂಸ್ಥಾನಗಳನ್ನು ಹೊರತುಪಡಿಸಿ ಉಳಿದಂತೆ ೫೫೦ಕ್ಕೂ ಹೆಚ್ಹು ಸಂಸ್ಥಾನಗಳ ಅರಸರ ಮನವೊಲಿಸಿ ಅಖಂಡ ಪ್ರಜಾಪ್ರಭುತ್ವವಾದಿ ಭಾರತದ ಹುಟ್ಟಿಗೆ ಅಕ್ಷರಶಃ ಕಾರಣಕರ್ತರಾದವರೇ ನಮ್ಮ ಸರ್ದಾರ್ ಪಟೇಲರು ಎಂದ ಅವರು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವಿಸ್ಮರಣೀಯ ಕೊಡುಗೆ ನೀಡಿ ಅಖಂಡ ಭಾರತದ ಕನಸು ಕಂಡು ಅದನ್ನು ಸಾಕಾರಗೊಳಿಸುವಲ್ಲಿ ಹಗಲಿರುಳು ಅವಿರತವಾಗಿ ಪರಿಶ್ರಮಪಟ್ಟು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಬಳಿಕ ಪ್ರಜಾಪ್ರಭುತ್ವವಾದಿ ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನಿ ಮತ್ತು ಮೊದಲ ಗೃಹ ಸಚಿವರಾದ ಉಕ್ಕಿನ ಮನುಷ್ಯ ಎಂಬ ಅನ್ವರ್ಥನಾಮದಿಂದ ದೇಶಾದ್ಯಂತ ಚಿರಪರಿಚಿತರಾದ ಸರ್ದಾರ್ ಪಟೇಲ್ ಅವರ ಸಾಧನೆ ಮತ್ತು ಕೊಡುಗೆಯನ್ನು ದೇಶ ಯಾವತ್ತೂ ಮರೆಯುವಂತೆಯೇಇಲ್ಲವೆಂದು ಹೇಳಿದರು.
ನಿವೃತ್ತ ಶಿಕ್ಷಕಿ ಕಾವೇರಿಯಮ್ಮ ನವರ ವಚನ ಗಾಯನದ ಮೂಲಕ ಸಾರ್ಥಕವಾದ ಈ ಕಾರ್ಯಕ್ರಮ ಪ್ರಾರಂಭವಾಯಿತು. ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ ಮತ್ತು ಕಾವೇರಿ ಬಳಗದ ಅಧ್ಯಕ್ಷೆ ಎನ್.ಕೆ. ಕಾವೇರಿಯಮ್ಮ ಅವರು ಸರ್ದಾರ್ ಪಟೇಲ್ ನೆನಪಿನಾರ್ಥ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ವಿತರಿಸಿದರು.ಮುಖ್ಯ ಶಿಕ್ಷಕಿ ಸುಗುಣಾವತಿ ಅವರು ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ವಿ. ಮುರುಳಿಧರ್, ಮುಕ್ತಕ ಕವಿ ಎಂ.ಮುತ್ತುಸ್ವಾಮಿ ಹಾಗೂ ಮಲ್ಲೇಶ್ ಅವರುಗಳು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.