ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಅಪರಿಚಿತ ವ್ಯಕ್ತಿಯಿಂದ ಮತ್ತೆ ಜೀವ ಬೆದರಿಕೆ ಬಂದಿದ್ದು, 2 ಕೋಟಿ ರೂ.ಗೆ ಬೇಡಿಕೆಯಿಟ್ಟಿರುವುದಾಗಿ ಮುಂಬೈ ಟ್ರಾಫಿಕ್ ಪೊಲೀಸರಿಗೆ ಸಂದೇಶ ಕಳುಹಿಸಿದ್ದಾರೆ.
ಮೇಲಿಂದ ಮೇಲೆ ಸಲ್ಮಾನ್ ಖಾನ್ ಜೀವಕ್ಕೆ ಕುತ್ತು ಬರುತ್ತಿದ್ದು, ಜೀವ ಬೆದರಿಕೆಗಳು ಬರುತ್ತಲೇ ಇವೆ. ಜೀವ ಬೆದರಿಕೆ ಸಂದೇಶದ ಜೊತೆಗೆ 2 ಕೋಟಿ ರೂ. ಬೇಡಿಕೆಯಿಟ್ಟಿದ್ದಾರೆ. ಜೊತೆಗೆ ಹಣ ನೀಡದಿದ್ದರೆ ಹತ್ಯೆ ಮಾಡುವುದಾಗಿ ಸಂದೇಶ ಕಳುಹಿಸಲಾಗಿದೆ.
ಬೆದರಿಕೆ ಸಂದೇಶ ಬಂದ ಬೆನ್ನಲ್ಲೇ ಮುಂಬೈನ ವರ್ಲಿ ಜಿಲ್ಲೆಯ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಎನ್‌ಸಿಪಿ ಶಾಸಕ ದಿವಂಗತ ಬಾಬಾ ಸಿದ್ದಿಕಿ ಅವರ ಪುತ್ರ ಜೀಶನ್ ಸಿದ್ದಿಕಿ ಹಾಗೂ ನಟ ಸಲ್ಮಾನ್ ಖಾನ್ ಇಬ್ಬರಿಗೂ ಜೀವ ಬೆದರಿಕೆ ಬಂದಿತ್ತು. ಇದರ ಬೆನ್ನಲ್ಲೇ ಮುಂಬೈ ಪೊಲೀಸರು ಮಂಗಳವಾರ ನೋಯ್ಡಾದಲ್ಲಿ 20 ವರ್ಷದ ಗುರ್ಫಾನ್ ಖಾನ್ ಎಂಬುವರನ್ನು ಬಂಧಿಸಿದ್ದಾರೆ. ಮೊಹಮ್ಮದ್ ತಯ್ಯಬ್ ಎಂದು ಗುರುತಿಸಲಾದ ಆರೋಪಿಯನ್ನು ನೋಯ್ಡಾದ ಸೆಕ್ಟರ್ 39ರಲ್ಲಿ ಬಂಧಿಸಲಾಗಿದೆ.
ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ 2022 ರಲ್ಲಿ ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆಯ ಪತ್ರವು ಅವರ ನಿವಾಸದ ಬಳಿಯ ಬೆಂಚ್‌ನಲ್ಲಿ ಕಂಡುಬಂದಿತ್ತು. ಮಾರ್ಚ್ 2023ರಲ್ಲಿ ಗೋಲ್ಡಿ ಬ್ರಾರ್ ಅವರು ಕಳುಹಿಸಿದ್ದಾರೆಂದು ಆರೋಪಿಸಲಾದ ಇಮೇಲ್ ಕೂಡ ಖಾನ್‌ಗೆ ಸಿಕ್ಕಿತ್ತು. 2024 ರಲ್ಲಿ, ಇಬ್ಬರು ಅಪರಿಚಿತ ವ್ಯಕ್ತಿಗಳು ನಕಲಿ ಗುರುತುಗಳನ್ನು ಬಳಸಿಕೊಂಡು ಪನ್ವೆಲ್‌ನಲ್ಲಿರುವ ಖಾನ್ ಅವರ ಫಾರ್ಮ್ಹೌಸ್‌ಗೆ ಅತಿಕ್ರಮಣ ಮಾಡಲು ಪ್ರಯತ್ನಿಸಿದ್ದರು.