ಬೆಂಗಳೂರು : ಸಿಎಂ ಕುರ್ಚಿ ಕದನ ಭಾರಿ ಗದ್ದಲ ಉಂಟು ಮಾಡಿದ್ದು, ಇನ್ನೇನು ಸರ್ಕಾರದ ಬುಡವೇ ಅಲುಗಾಡಲಿದೆ ಎಂಬ ಹಂತಕ್ಕೆ ಬಂದಿದ್ದ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಭಿನ್ನಮತ ಕೇವಲ ಒಂದೇ ಒಂದು ಬ್ರೇಕ್ ಫಾಸ್ಟ್‌ನಲ್ಲಿ ಶಮನವಾಗಿರುವಾಗ ಬಿಜೆಪಿಯಲ್ಲಿ ಇದು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆ ಉದ್ಭವಿಸಿದೆ.
ಮುಖ್ಯಮಂತ್ರಿ ಕುರ್ಚಿಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ನಡುವೆ ನಾನಾ? ನೀನಾ? ಎಂಬ ಹಂತಕ್ಕೆ ಪರಿಸ್ಥಿತಿ ಕೈ ಮೀರಿತ್ತು. ಅದಲ್ಲದೇ ಎರಡೂ ಕಡೆಯ ಶಾಸಕರು ದೆಹಲಿ ಪ್ರವಾಸವನ್ನೂ ಸಹ ನಡೆಸಿದ್ದರು.
ಭಾರೀ ಜನಾದೇಶ ಪಡೆದು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ ಇನ್ನೇನು ಅಸ್ಥಿರಗೊಳ್ಳುತ್ತದೆ ಎಂದೇ ಜನತೆ ಭಾವಿಸಿದ್ದರು. ಅಲ್ಲಿಯವರೆಗೂ ಕಾದು ನೋಡುವ ತಂತ್ರ ಅನುಸರಿಸಿದ್ದ ಹೈಕಮಾಂಡ್ ನಾಯಕರು ಕೊನೆಗೂ ಮಧ್ಯಪ್ರವೇಶ ಮಾಡಿ ನೀವಿಬ್ಬರೂ ಒಟ್ಟಾಗಿ ಕುಳಿತು ಚರ್ಚಿಸಿ ದೆಹಲಿಗೆ ಬನ್ನಿ ಎಂದು ಸೂಚನೆ ನೀಡಿದ್ದರು.
ಇದಾದ ಬಳಿಕ ನಡೆದಿದ್ದೆಲ್ಲವೂ ಪವಾಡವೇ ಸರಿ. ಹಾವು-ಮುಂಗೂಸಿಯಂತಿದ್ದ ಸಿಎಂ-ಡಿಸಿಎಂ, ಇಬ್ಬರ ನಡುವೆ ಏನೂ ನಡೆದೇ ಇಲ್ಲ. ಮುಂದೆಯೂ ನಡೆಯುವುದಿಲ್ಲ ಎಂಬಂತೆ ನಾವು ಒಗ್ಗಟ್ಟಾಗಿರುತ್ತೇವೆ ಎಂದು ಹೇಳಿದರು. ಈಗ ಡಿಸಿಎಂ ಕೂಡ ಸಿಎಂ ಅವರನ್ನು ತಮ್ಮ ನಿವಾಸಕ್ಕೆ ಬ್ರೇಕ್ ಫಾಸ್ಟ್‌ಗಾಗಿ ಆಹ್ವಾನಿಸಿ ಎಲ್ಲವೂ ಸುಖಾಂತ್ಯ ಕಾಣಲಿದೆ ಎಂಬ ಸಂದೇಶವನ್ನು ರವಾನಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಪ್ರತಿ ಪಕ್ಷ ಬಿಜೆಪಿಯ ಪರಿಸ್ಥಿತಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾವಾಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೂ ಅಂದಿನಿಂದ ಈವರೆಗೂ ಅದೇ ಬಿಕ್ಕಟ್ಟು, ಭಿನ್ನಮತ, ಗೊಂದಲ, ಗುಂಪುಗಾರಿಕೆ ಈ ಕ್ಷಣದವರೆಗೂ ನಿವಾರಣೆಯಾಗಿಲ್ಲ. ಕೇಂದ್ರ ಮತ್ತು ಅನೇಕ ರಾಜ್ಯಗಳಲ್ಲಿ ಅಧಿಕಾರ ಹಿಡಿದು ಅತ್ಯಂತ ಬಲಿಷ್ಠ ಹೈಕಮಾಂಡ್ ನಮ್ಮದು ಎಂದು ಹೇಳಿಕೊಳ್ಳುವ ಬಿಜೆಪಿ ನಾಯಕರಿಗೆ ಕರ್ನಾಟಕದಲ್ಲಿನ ಬಿಕ್ಕಟ್ಟು ಇತ್ಯರ್ಥ ಮಾಡುವ ಸಮಯ ಬಂದಾಗ ನೋಡಿಕೊಳ್ಳೋಣ ಎಂಬ ನಿರ್ಧಾರಕ್ಕೆ ಬಂದಂತಿದ್ದಾರೆ ಎನ್ನಲಾಗಿದೆ.
ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಬದಲಾಯಿಸಬೇಕೆಂದು ಪಕ್ಷದೊಳಗಿನ ಒಂದು ಬಣ ಈಗಲೂ ಪ್ರತ್ಯೇಕವಾಗಿ ಸಭೆಗಳನ್ನು ನಡೆಸುತ್ತಲೇ ಇದ್ದು, ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಉಚ್ಛಾಟನೆಗೊಂಡ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆ ಈಗಲೂ ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಪಿ.ಹರೀಶ್, ಮಾಜಿ ಸಚಿವ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ ಸೇರಿದಂತೆ ಅನೇಕರು ಬಹಿರಂಗವಾಗಿಯೇ ಗುರುತಿಸಿಕೊಳ್ಳುತ್ತಿದ್ದಾರೆ.
ಪಕ್ಷದಿಂದ ಉಚ್ಛಾಟನೆಗೊಂಡವರ ಜೊತೆ ಗುರುತಿಸಿಕೊಂಡರೆ ನಿಮಗೂ ಅದೇ ಗತಿ ಎಂದು ಹೇಳುವ ದಾರ್ಷ್ಯ ಒಬ್ಬೇ ಒಬ್ಬ ನಾಯಕನಿಗೂ ಇಲ್ಲ. ಸಮಯ ಬಂದಾಗ ದೆಹಲಿ ನಾಯಕರು ನೋಡಿಕೊಳ್ಳುತ್ತಾರೆಂಬ ಉತ್ತರ ನೀಡಿ ಸುಮ್ಮನಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲಪ್ರದೇಶದಲ್ಲಿ ಮಾತ್ರ ಅಧಿಕಾರದಲ್ಲಿದೆ. ಈ ಮೂರು ರಾಜ್ಯಗಳನ್ನು ಗೆದ್ದರೆ ಕಾಂಗ್ರೆಸ್ ಮುಕ್ತ ಭಾರತವಾಗುತ್ತದೆ ಎಂದು ಜಂಭ ಕೊಚ್ಚಿಕೊಳ್ಳುವ ಇಲ್ಲಿನ ನಾಯಕರಿಗೆ ತಮ ಪಕ್ಷವೇ ಮನೆಯೊಂದು ಮೂರು ಬಾಗಿಲಾಗಿದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಿರುವುದು ಇಂದಿನ ಬಿಜೆಪಿ ಪರಿಸ್ಥಿತಿಗೆ ಕಾರಣ ಎಂದು ಅಲ್ಲಿನ ಕಾರ್ಯಕರ್ತರೇ ನೋವು ಹೊರಹಾಕುತ್ತಿದ್ದಾರೆ.
ಕೇವಲ ಒಂದೇ ಒಂದು ಹೈಕಮಾಂಡ್ ಸಂದೇಶಕ್ಕೆ ಕಾಂಗ್ರೆಸ್ ಭಿನ್ನಮತ ಕ್ಷಣಾರ್ಧದಲ್ಲೇ ಬಗೆಹರಿಯಿತು. ಸಿಎಂ-ಡಿಸಿಎಂ ಇಬ್ಬರನ್ನೂ ಒಂದೇ ವೇದಿಕೆಗೆ ಕರೆತರುವಲ್ಲಿ ದೆಹಲಿ ನಾಯಕರು ಯಶಸ್ವಿಯಾದರು. ಇದು ಕಾರ್ಯಕರ್ತರಲ್ಲೂ ಹೊಸ ಹುಮಸ್ಸು ಮೂಡಿಸಿದೆ. ಇದೇ ಪ್ರಯೋಗವನ್ನು ಬಿಜೆಪಿಯಲ್ಲಿ ಏಕೆ ಮಾಡಬಾರದು? ಅಸಮಾಧಾನಗೊಂಡಿರುವ ಎಲ್ಲಾ ನಾಯಕರನ್ನು ಒಂದೇ ವೇದಿಕೆಗೆ ಕರೆತಂದು ಬಿಕ್ಕಟ್ಟನ್ನು ಶಮನ ಮಾಡಬಹುದು. ಕಾಂಗ್ರೆಸ್ ಬಗ್ಗೆ ಮಾತನಾಡುವ ಬದಲು ತಮ್ಮಲ್ಲಿರುವ ಅಸಮಾಧಾನವನ್ನು ಏಕೆ ಪರಿಹರಿಸಬಾರದೆಂದು ನಿಷ್ಠಾವಂತ ಕಾರ್ಯಕರ್ತರೇ ಪ್ರಶ್ನೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇಡೀ ದೇಶದಲ್ಲೇ ಕರ್ನಾಟಕ ಮತ್ತು ಉತ್ತರಪ್ರದೇಶ ಹೊರತುಪಡಿಸಿದರೆ ಎಲ್ಲಾ ರಾಜ್ಯಗಳಿಗೂ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಬಿ.ವೈ.ವಿಜಯೇಂದ್ರ ಅವಧಿ ಮುಗಿದು ತಿಂಗಳುಗಳೇ ಕಳೆದಿವೆ. ಅವರು ಹಂಗಾಮಿ ಇಲ್ಲವೇ ಪೂರ್ಣಾವಧಿಯ ಅಧ್ಯಕ್ಷರೇ ಎಂಬುದನ್ನು ವರಿಷ್ಠರು ಈಗಲೂ ಸ್ಪಷ್ಟಪಡಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
ದೆಹಲಿಗೆ ಹೋದಾಗ ಒಂದಿಬ್ಬರು ಪ್ರಮುಖ ನಾಯಕರನ್ನು ಭೇಟಿಯಾಗಿ ಆ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ನಮ್ಮ ಸ್ಥಾನ ಈಗಲೂ ಗಟ್ಟಿ ಎಂಬ ಸಂದೇಶವನ್ನು ವಿರೋಧಿಗಳಿಗೆ ನೀಡಲು ಬಳಸಿಕೊಳ್ಳುತ್ತಿದ್ದಾರೆ ಹೊರತು ಬೇರೆನೂ ಇಲ್ಲ. ಈಗಲೂ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯುವುದು ಬೇಡ ಎಂದು ಒಂದು ಬಣ ಹೇಳಿದರೆ, ಮತ್ತೊಂದು ಬಣ ಅವರೇ ಇರಲಿ ಎನ್ನುತ್ತಿದೆ. ಇದರ ನಡುವೆ ಕೊನೆಗೊಂದು ದಿನ ಅದೃಷ್ಟ ತಮಗೆ ಕೂಡಿ ಬರಬಹುದೆಂದು ಕೆಲವರು ಕಾಯುತ್ತಿದ್ದಾರೆ. ಈ ಎಲ್ಲ ಅವಾಂತರದಿಂದಾಗಿ, ಗೊಂದಲದಿಂದಾಗಿ ದಕ್ಷಿಣ ಭಾರತದ ಹೆಬ್ಬಾಗಿಲು ಕರ್ನಾಟಕದಲ್ಲಿ ನಳನಳಿಸಬೇಕಿದ್ದ ಕಮಲ ಬಾಡುವ ಹಂತಕ್ಕೆ ಬಂದಿದೆ ಎಂದಿದ್ದಾರೆ.



