ಗುಂಡ್ಲುಪೇಟೆ: ಕೇಬಲ್ ಅಳವಡಿಕೆಗೆ ಅವೈಜ್ಞಾನಿಕವಾಗಿ ಗುಂಡ್ಲುಪೇಟೆ-ಚಾಮರಾಜನಗರ ಮುಖ್ಯ ರಸ್ತೆ ಅಗೆದಿರುವ ಹಿನ್ನಲೆ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.
ಗುಂಡ್ಲುಪೇಟೆ-ಚಾಮರಾಜನಗರ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚಾರ ಮಾಡುತ್ತಿದ್ದು, ಪಟ್ಟಣದ ಹೊರವಲಯದ ಶಿವಾನಂದ ಸ್ಮಾರಕದ ಮುಂಭಾಗದ ರಸ್ತೆಯ ಮಧ್ಯೆ ಭಾಗದಲ್ಲಿ ಕೇಬಲ್ ಅಳವಡಿಕೆ ಮಾಡುವ ಉದ್ದೇಶದಿಂದ ಅವೈಜ್ಞಾನಿಕವಾಗಿ ಅಗೆಯಲಾಗಿದೆ. ಕೆಲಸ ಮುಗಿದ ನಂತರ ಅಗೆದ ಜಾಗಕ್ಕೆ ಮಣ್ಣು ಹಾಕಲಾಗಿದೆ. ಇದರಿಂದ ರಸ್ತೆ ಮಧ್ಯೆ ಹಳ್ಳ ಉಂಟಾಗಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇನ್ನೂ ಮಳೆ ಸಂದರ್ಭದಲ್ಲಿ ಹಳ್ಳದಲ್ಲಿ ನೀರು ನಿಲ್ಲುತ್ತಿದ್ದು, ಸಮಸ್ಯೆ ಮತ್ತಷ್ಟು ಹೆಚ್ಚಿದೆ.
ರಸ್ತೆ ಮಧ್ಯೆ ಅಗೆದ ಹಳ್ಳಕ್ಕೆ ಮಣ್ಣು ಹಾಕಿರುವ ಹಿನ್ನಲೆ ಅಧಿಕ ಭಾರದ ವಾಹನಗಳ ಸಂಚಾರದಿಂದ ಮಣ್ಣು ಮೇಲೆದಿದೆ. ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರಂತು ಜೀವ ಕೈಯಲ್ಲಿಡಿದು ಸಂಚಾರ ಮಾಡಬೇಕಾಗಿದೆ. ವೇಗವಾಗಿ ಚಲಿಸುವ ವಾಹನಗಳಿಗಂತು ತೊಂದರೆ ತಪ್ಪಿದ್ದಲ್ಲ. ಹೀಗಿದ್ದರೂ ಕೂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಆದ್ದರಿಂದ ಅಗೆದ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸಬೇಕೆಂದು ಶಿವಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಾಜಿ ಉಪಾಧ್ಯಕ್ಷ ಶಿವಪುರ ಮಂಜಪ್ಪ ಒತ್ತಾಯಿಸಿದ್ದಾರೆ.