ಮೈಸೂರು: ಉಪೇಂದ್ರ ಹೇಳಿಕೆ ಅವರ ಕೊಳಕು ಮನಸ್ಥಿತಿಯನ್ನ ತೋರಿಸುತ್ತದೆ. ಸಮಾಜಕ್ಕೆ ಮಾರ್ಗ ದರ್ಶನ ಮಾಡುವವರೇ ಈ ರೀತಿ ಮಾತನಾಡುವುದು ಎಷ್ಟು ಸರಿ ಎಂದು ಸಚಿವ ಡಾ ಹೆಚ್.ಸಿ ಮಹದೇವಪ್ಪ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿಂದು ನಟ ಉಪೇಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಶತಮಾನಗಳಿಂದ ಶೋಷಿತವಾಗಿರುವ ಸಮುದಾಯವನ್ನ ಮತ್ತೆ ಮತ್ತೆ ಯಾಕೆ ನೋಯಿಸುತ್ತೀರಾ. ಉಪೇಂದ್ರ ಹೇಳಿಕೆಯಿಂದ ಇಡೀ ಸಮಾಜಕ್ಕೆ ನೋವಾಗಿದೆ. ಈಗಾಗಲೇ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತೆ ಎಂದು ಹೇಳಿದ್ದಾರೆ.
ಸರ್ಕಾರ ಸುಭದ್ರವಾಗಿದೆ
ಏಳು ತಿಂಗಳಿನಲ್ಲಿ ಸರ್ಕಾರ ಬೀಳುತ್ತದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ. ಆನೆ ಹೋಗುತ್ತಿರುತ್ತದೆ,ನರಿ ಅದನ್ನೇ ಬೀಳುತ್ತದೆ ಎಂದು ಕಾಯುತ್ತಿರುತ್ತದೆ. ಬಿಜೆಪಿಯವರ ಪಾಡು ಈ ರೀತಿಯಾಗಿದೆ. ಸರ್ಕಾರಕ್ಕೆ ಒಳ್ಳೆ ಹೆಸರು ಬರುತ್ತಿದೆ. ಅದನ್ನ ಕೆಡಿಸಲು ಈ ರೀತಿ ಹೇಳಿಕೆಗಳನ್ನು ಹೇಳುತ್ತಿದ್ದಾರೆ. ಅಪರೇಷನ್ ಕಮಲ ಯಾವುದು ಕರ್ನಾಟಕದಲ್ಲಿ ನಡೆಯುವುದಿಲ್ಲ. ಅಂತಹ ಅಪರೇಷನ್ ನಡೆಸಿದ್ದಕ್ಕೆ ಅವರಿಗೆ ಇವತ್ತು ಈ ಸ್ಥಿತಿ ಬಂದಿದೆ. ಇಲ್ಲಿ ಬಿಜೆಪಿಯ ಯಾವ ಆಟವೂ ನಡೆಯುವುದಿಲ್ಲ. ಸರ್ಕಾರ ಸುಭದ್ರವಾಗಿದೆ ಎಂದು ತಿಳಿಸಿದರು.
ಈ ವೇಳೆ ಮಾತನಾಡಿದ ಸಚಿವ ಕೆ.ವೆಂಕಟೇಶ್, ಬಿಜೆಪಿ, ಜೆಡಿಎಸ್ ನಿಂದಲೇ ನಮ್ಮ ಕಡೆಗೆ ಬರುವವರು ತಯಾರಿದ್ದಾರೆ. ನಾವೇನೂ ಕರೆಯುತ್ತಿಲ್ಲ. ಅವರಾಗಿ ಅವರೇ ನಮ್ಮ ಕಡೆ ಬರುತ್ತಿದ್ದಾರೆ. ಇನ್ನೂ ಈ ಸ್ಥಿತಿಯಲ್ಲಿ ಸರ್ಕಾರ ಹೇಗೆ ಅಸ್ಥಿರವಾಗುತ್ತದೆಎಂದು ಹೇಳಿದರು.
ನೂರು ಸುಳ್ಳು ಹೇಳಿ ಒಂದು ಸತ್ಯ ಮಾಡಲು ಹೊರಟಿದ್ದಾರೆ. ಸರ್ಕಾರ ಚೆನ್ನಾಗಿ ಕೆಲಸ ಮಾಡುತ್ತಿದೆ. ಹೇಗಾದರೂ ಸರಿ ಈ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕೆಂದು ಬಿಜೆಪಿಯವರು ಪ್ರಯತ್ನ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.