ನವದೆಹಲಿ: ತೆರಿಗೆ ಪಾವತಿದಾರರಿಗೆ ಹೆಚ್ಚಿನ ಅನುಕೂಲವಾಗುವ ನಿಟ್ಟಿನಲ್ಲಿ ಯುಪಿಐ ಮೂಲಕದ ಪ್ರತಿ ಹಣ ವರ್ಗಾವಣೆ ಮಿತಿಯನ್ನು 1ಲಕ್ಷದಿಂದ ಐದು ಲಕ್ಷ ರೂಪಾಯಿಗೆ ಏರಿಕೆ ಮಾಡಿರುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ (ಆಗಸ್ಟ್ 08) ತಿಳಿಸಿದೆ.
ಹಣ ವರ್ಗಾವಣೆಯ ಮಿತಿಯನ್ನು ಏರಿಕೆ ಮಾಡಿದ್ದರಿಂದ ಅಧಿಕ ತೆರಿಗೆ ಬಾಧ್ಯತೆ ಹೊಂದಿರುವ ತೆರಿಗೆ ಪಾವತಿದಾರರು ತಮ್ಮ ಬಾಕಿಯನ್ನು ತ್ವರಿತವಾಗಿ ಮತ್ತು ಯಾವುದೇ ಅಡೆತಡೆ ಇಲ್ಲದೇ ಪಾವತಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲಿದೆ ಎಂದು ವಿವರಿಸಿದೆ.
ಮೂರು ದಿನಗಳ ಹಣಕಾಸು ನೀತಿ ಸಮಿತಿ ಸಭೆಯಲ್ಲಿನ ಮಾಹಿತಿಯನ್ನು ಪ್ರಕಟಿಸಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ತೆರಿಗೆ ಪಾವತಿ ಉದ್ದೇಶಕ್ಕಾಗಿ ಪ್ರಸ್ತುತ ಇರುವ ಯುಪಿಐ ಮೂಲಕದ 1ಲಕ್ಷ ರೂ. ಹಣ ವರ್ಗಾವಣೆ ಮಿತಿಯನ್ನು 5 ಲಕ್ಷ ರೂಪಾಯಿಗೆ ಏರಿಕೆ ಮಾಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ವಿಶಿಷ್ಟ ಫೀಚರ್ಸ್ ಗಳಿಂದಾಗಿ ಹಣ ವರ್ಗಾವಣೆಗೆ ಯುಪಿಐ ಈಗ ಆತ್ಯಂತ ಆದ್ಯತೆಯ ವಿಧಾನವಾಗಿದೆ. ಪ್ರಸ್ತುತ ಯುಪಿಐನಲ್ಲಿ ಹಣ ವರ್ಗಾವಣೆ ಮಿತಿ 1ಲಕ್ಷ ರೂಪಾಯಿಗೆ ಸೀಮಿತಗೊಳಿಸಲಾಗಿತ್ತು.
ಆದರೆ ಬಳಕೆದಾರರ ಹಲವು ದೂರಿನ ಹಿನ್ನೆಲೆಯಲ್ಲಿ ಉದಾಃ ಕ್ಯಾಪಿಟಲ್ ಮಾರ್ಕೆಟ್ಸ್, ಐಪಿಒ, ಲೋನ್ ಕಲೆಕ್ಷನ್ಸ್, ಇನ್ಸುರೆನ್ಸ್, ಮೆಡಿಕಲ್, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಕೆಲವು ಕೆಟಗರಿಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆ ಪಾವತಿ ಸಾಮಾನ್ಯವಾಗಿದೆ. ಇದರಲ್ಲಿ ದೊಡ್ಡ ಮೊತ್ತ ಸೇರಿದಂತೆ ಸಣ್ಣ ಪ್ರಮಾಣದ ತೆರಿಗೆ ಪಾವತಿಯೂ ಇದೆ. ಈ ನಿಟ್ಟಿನಲ್ಲಿ ಯುಪಿಐ ಮೂಲಕದ ಹಣ ವರ್ಗಾವಣೆ ಮಿತಿಯನ್ನು 5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ಗವರ್ನರ್ ದಾಸ್ ತಿಳಿಸಿದ್ದಾರೆ.