ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿಚಾರಗಳಿಂದ ಸುದ್ದಿಯಾಗಿರುವ ವಿವಾದಾತ್ಮಕ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರ ತಾತ್ಕಾಲಿಕ ಉಮೇದುವಾರಿಕೆಯನ್ನು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಬುಧವಾರ ರದ್ದುಗೊಳಿಸಿದೆ. ಆಯೋಗ ನಡೆಸುವ ಮುಂದಿನ ಎಲ್ಲಾ ಪರೀಕ್ಷೆಗಳಲ್ಲಿ ಹಾಜರಾಗುವುದನ್ನು ಶಾಶ್ವತವಾಗಿ ನಿರ್ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾಗರಿಕ ಸೇವಾ ಪರೀಕ್ಷೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಖೇಡ್ಕರ್ ತಪ್ಪಿತಸ್ಥರೆಂದು ಯುಪಿಎಸ್‌ಸಿ ಹೇಳಿಕೆಯಲ್ಲಿ ತಿಳಿಸಿದೆ.
ಅಕ್ರಮ ಕಾರಣಕ್ಕೆ 2024 ರ ಜುಲೈ 18 ರಂದು ನಾಗರಿಕ ಸೇವಾ ಪರೀಕ್ಷೆ-2022 (CSE-2022) ರ ತಾತ್ಕಾಲಿಕವಾಗಿ ಶಿಫಾರಸು ಮಾಡಲಾದ ಅಭ್ಯರ್ಥಿಯಾಗಿರುವ ಪೂಜಾ ಖೇಡ್ಕರ್ ಅವರಿಗೆ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ನಿಂದ ಶೋಕಾಸ್ ನೋಟಿಸ್ ನೀಡಲಾಗಿತ್ತು. ಜುಲೈ 25 ರೊಳಗೆ ನೋಟಿಸ್‌ಗೆ ಪ್ರತಿಕ್ರಿಯೆಯನ್ನು ಸಲ್ಲಿಸಲು ತಿಳಿಸಲಾಗಿತ್ತು. ಆದರೆ ಅವರು ಆಗಸ್ಟ್ 4 ರವರೆಗೆ ಸಮಯ ಕೋರಿದ್ದರು.
ಯುಪಿಎಸ್‌ಸಿ ಜುಲೈ 30 ರವರೆಗೆ ಅವರಿಗೆ ಸಮಯ ನೀಡಿತು. ಇದು ಅಂತಿಮ ಅವಕಾಶ, ಸಮಯದಲ್ಲಿ ಯಾವುದೇ ವಿಸ್ತರಣೆಗೆ ಅನುಮತಿ ನೀಡಲ್ಲ ಎಂದು ಸ್ಪಷ್ಟಪಡಿಸಿತ್ತು. ಗಡುವಿನೊಳಗೆ ಯಾವುದೇ ಪ್ರತಿಕ್ರಿಯೆ ಬರದಿದ್ದರೆ, ಯುಪಿಎಸ್‌ಸಿ ಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಲಾಗಿತ್ತು.
ನಿಗದಿತ ಸಮಯದೊಳಗೆ ತನ್ನ ವಿವರಣೆ ಸಲ್ಲಿಸಲು ಪೂಜಾ ಖೇಡ್ಕರ್ ವಿಫಲರಾದರು. UPSC ಲಭ್ಯವಿರುವ ದಾಖಲೆಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿದೆ. CSE-2022 ನಿಯಮಗಳ ನಿಬಂಧನೆಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ಕಂಡುಬಂದಿದೆ. ಹೀಗಾಗಿ CSE-2022 ಗಾಗಿ ಅವರ ತಾತ್ಕಾಲಿಕ ನೇಮಕಾತಿ ರದ್ದುಗೊಳಿಸಲಾಗಿದೆ. ಮುಂದಿನ ಎಲ್ಲಾ ಪರೀಕ್ಷೆಗಳಿಂದ ಅವರನ್ನು ಶಾಶ್ವತವಾಗಿ ಡಿಬಾರ್ ಮಾಡಲಾಗಿದೆ ಎಂದು ಯುಪಿಎಸ್‌ಸಿ ತಿಳಿಸಿದೆ.