ನ್ಯೂಯಾರ್ಕ್: ವರ್ಷದ ಕೊನೆಯ ಗ್ರ್ಯಾನ್‌ಸ್ಲಾಂ ಟೂರ್ನಿಯಾಗಿರುವ ಯುಎಸ್ ಓಪನ್ ಟೆನಿಸ್‌ಗೆ ಇಂದಿನಿಂದ ಆರಂಭ. ಇದರೊಂದಿಗೆ ದಾಖಲೆಯ ೨೩ ಗ್ರ್ಯಾನ್‌ಸ್ಲಾಂಗಳ ಒಡೆಯ ನೋವಾಕ್ ಜೋಕೋವಿಚ್ ಹಾಗೂ ಹಾಲಿ ಚಾಂಪಿಯನ್ ಕಾರ್ಲೊಸ್ ಆಲ್ಕರಜ್‌ರ ಪ್ರಶಸ್ತಿ ಫೈಟ್‌ಗೆ ಮತ್ತೊಂದು ವೇದಿಕೆ ಸಜ್ಜಾಗಿದೆ.
ಇತ್ತೀಚೆಗಷ್ಟೇ ಜೋಕೋವಿಚ್‌ರನ್ನೇ ಸೋಲಿಸಿ ವಿಂಬಲ್ಡನ್ ಗೆದ್ದಿರುವ ೨೦ರ ಆಲ್ಕರಜ್, ಯುಎಸ್ ಓಪನ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ೩ನೇ ಗ್ರ್ಯಾನ್‌ಸ್ಲಾಂ ಗೆಲ್ಲಲು ಕಾತರಿಸುತ್ತಿದ್ದಾರೆ. ಮತ್ತೊಂದೆಡೆ ೨೦೧೮ರಲ್ಲಿ ಕೊನೆ ಬಾರಿ ಯುಎಸ್ ಓಪನ್ ಗೆದ್ದಿರುವ ಜೋಕೋ, ಒಟ್ಟಾರೆ ೪ನೇ ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟಿದ್ದಾರೆ. ಮೊದಲ ಸುತ್ತಲ್ಲಿ ಜೋಕೋಗೆ ಫ್ರಾನ್ಸ್‌ನ ಮುಲ್ಲರ್, ಆಲ್ಕರಜ್‌ಗೆ ಜರ್ಮನಿಯ ಕೂಪರ್ ಸವಾಲು ಎದುರಾಗಲಿದೆ. ೨೦೨೧ರ ಚಾಂಪಿಯನ್ ಡ್ಯಾನಿಲ್ ಮೆಡ್ವೆಡೆವ್, ೨೦೧೬ರ ಚಾಂಪಿಯನ್ ವಾಂವ್ರಿಕಾ, ೨೦೧೨ರ ಚಾಂಪಿಯನ್ ಆಂಡಿ ಮರ್ರೆ, ಯುವ ತಾರೆಗಳಾದ ಹೋಲ್ಗರು ರ್‍ಯುನ್, ಕ್ಯಾಸ್ಪೆರ್ ರುಡ್, ಸೇರಿದಂತೆ ಹಲವರು ಪುರುಷರ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದಾರೆ.
ಸತತ ೨ನೇ ಪ್ರಶಸ್ತಿ ಮೇಲೆ ಇಗಾ ಚಿತ್ತ: ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.೧, ಹಾಲಿ ಚಾಂಪಿಯನ್ ಇಗಾ ಸ್ವಿಯಾಟೆಕ್ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿಕೊಂಡಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ಆಸ್ಟ್ರೇಲಿಯನ್ ಓಪನ್, ಯುಎಸ್ ಓಪನ್ ಹಾಗೂ ೨ ಬಾರಿ ಫ್ರೆಂಚ್ ಓಪನ್ ಗೆದ್ದಿರುವ ಪೋಲೆಂಡ್‌ನ ಸ್ವಿಯಾಟೆಕ್ ಈ ಬಾರಿ ಮತ್ತೊಂದು ಗ್ರ್ಯಾನ್‌ಸ್ಲಾಂ ನಿರೀಕ್ಷೆಯಲ್ಲಿದ್ದಾರೆ. ಇದೇ ವೇಳೆ ಕಳೆದ ವರ್ಷ ಕ್ವಾರ್ಟರ್‌ನಲ್ಲಿ ಸೋತರೂ ತವರಿನ ಅಂಗಳದಲ್ಲಿ ಮೊದಲ ಬಾರಿ ಗ್ರ್ಯಾನ್‌ಸ್ಲಾಂ ಪ್ರಶಸ್ತಿಗೆ ಮುತ್ತಿಡಲು ೧೯ರ ಕೊಕೊ ಗಾಫ್ ಕಾಯುತ್ತಿದ್ದಾರೆ. ೩ ಬಾರಿ ಯುಎಸ್ ಓಪನ್ ರನ್ನರ್-ಅಪ್, ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ, ೨೦೨೩ರ ವಿಂಬಲ್ಡನ್ ರನ್ನರ್-ಅಪ್, ಚೆಕ್ ಗಣರಾಜ್ಯದ ಮುಕೋವಾ, ೨೦೨೨ರ ವಿಂಬಲ್ಡನ್ ಚಾಂಪಿಯನ್, ಕಜಕಸ್ತಾನದ ಎಲೆನಾ ರಬೈಕೆನಾ, ಇತ್ತೀಚೆಗಷ್ಟೇ ವಿಂಬಲ್ಡನ್ ಗೆದ್ದ ಚೆಕ್ ಗಣರಾಜ್ಯದ ಮಾರ್ಕೆಟಾ ವೊಂಡ್ರೊಸೋವಾ ಕೂಡಾ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿದ್ದಾರೆ.