ಬೆಳಗಾವಿ: ಇತ್ತೀಚೆಗೆ ವಿಧಾನ ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಆಕ್ಷೇಪಾರ್ಹ ಪದ ಬಳಸಿರುವ ಬಿಜೆಪಿ ಎಂಎಲ್‌ಸಿ ಸಿ .ಟಿ ರವಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಸೋಮವಾರ ಒತ್ತಾಯಿಸಿದ್ದಾರೆ.
ಬಿಜೆಪಿಯನ್ನು ‘ಮಹಿಳಾ ವಿರೋಧಿ’ ಎಂದು ಕರೆದ ಅವರು, ಕಳೆದ ವಾರ ಸಂಸತ್ತಿನಲ್ಲಿ ಬಿ.ಆರ್ ಅಂಬೇಡ್ಕರ್ ವಿರುದ್ಧದ ಹೇಳಿಕೆಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಟೀಕಿಸಿದರು.
‘ಬಿಜೆಪಿಯವರು ದೇಶದ ಮಹಿಳೆಯರನ್ನು ಪದೇ ಪದೆ ಅವಮಾನಿಸುತ್ತಿದ್ದಾರೆ. ಮಹಿಳೆಯರು, ಯುವಕರು, ರೈತ ಮತ್ತು ದಲಿತ, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳನ್ನು ವಿರೋಧಿಸುವುದೇ ಬಿಜೆಪಿಯ ಗುಣವಾಗಿದೆ. ಬಿಜೆಪಿ ನಾಯಕರು ಮಹಿಳಾ ನಾಯಕಿಯರ ವಿರುದ್ಧ ಅವಹೇಳನಕಾರಿ ಪದ ಬಳಸುತ್ತಿರುವುದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾನು ಕರ್ನಾಟಕ ಸರ್ಕಾರವನ್ನು ಒತ್ತಾಯಿಸುತ್ತೇನೆ’ ಎಂದು ಸುರ್ಜೇವಾಲಾ ಇಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿ.19ರಂದು ವಿಧಾನ ಪರಿಷತ್ತಿನಲ್ಲಿ ನಡೆದ ವಾಗ್ವಾದದ ವೇಳೆ ಸದನವನ್ನು ಸ್ವಲ್ಪ ಹೊತ್ತು ಮುಂದೂಡಿದಾಗ ರವಿ ಅವರು ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಪದ ಬಳಸಿದ್ದರು.
ಹೆಬ್ಬಾಳ್ಕರ್ ಅವರು ನೀಡಿದ ದೂರಿನ ಮೇರೆಗೆ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದ ಬೆಳಗಾವಿಯ ಸುವರ್ಣ ವಿಧಾನ ಸೌಧದ ಆವರಣದಿಂದ ಅದೇ ದಿನ ಸಂಜೆ ಸಿ.ಟಿ ರವಿ ಅವರನ್ನು ಬಂಧಿಸಿ ಪೊಲೀಸ್ ವ್ಯಾನ್‌ನಲ್ಲಿ ಕರೆದೊಯ್ಯಲಾಯಿತು.
ಡಿಸೆಂಬರ್ 20 ರಂದು ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ರವಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿತು. ಸಿ.ಟಿ ರವಿ ಅವರನ್ನು ಬಂಧಿಸುವಲ್ಲಿ ಪೊಲೀಸರು ನಿಯಮಗಳನ್ನು ಪಾಲಿಸಲು ವಿಫಲರಾಗಿದ್ದಾರೆ ಎಂದಿತ್ತು.