ಬೆಂಗಳೂರು: ಹುಸಿ ಬಾಂಬ್ ಕರೆಗಳು ಮತ್ತು ಬೆದರಿಕೆ ಇಮೇಲ್‌ಗಳ ಮೂಲ ಪತ್ತೆಹಚ್ಚುವುದು ತಾಂತ್ರಿಕವಾಗಿ ಸವಾಲಿನ ಕೆಲಸವಾಗಿದ್ದರೂ, ಇಂತಹ ಕಿಡಿಗೇಡಿತನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಐಟಿ-ಬಿಟಿ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಇಸ್ರೋ (ISRO) ಸಂಸ್ಥೆಗೆ ಬಂದಿದ್ದ ಇತ್ತೀಚಿನ ಬಾಂಬ್ ಬೆದರಿಕೆ ಇಮೇಲ್ ಕುರಿತು ಮಾತನಾಡಿದ ಅವರು, ವಿಮಾನ ನಿಲ್ದಾಣಗಳು, ಥರ್ಮಲ್ ಪವರ್ ಪ್ಲಾಂಟ್‌ಗಳಂತಹ ಪ್ರಮುಖ ಸಂಸ್ಥೆಗಳಿಗೆ ಆಗಾಗ ಇಂತಹ ಬೆದರಿಕೆಗಳು ಬರುತ್ತಿವೆ. ಇವುಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದರು.
ಇನ್ನೂ ಸೈಬರ್ ದಾಳಿ ಮತ್ತು ಹುಸಿ ಇಮೇಲ್‌ಗಳನ್ನು ತಡೆಯಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನುರಿತ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಈ ಇಮೇಲ್‌ಗಳ ಐಪಿ ವಿಳಾಸಗಳು ಹಲವು ದೇಶಗಳಿಗೆ ಲಿಂಕ್ ಆಗಿರುವುದರಿಂದ ತಕ್ಷಣ ಪತ್ತೆಹಚ್ಚುವುದು ಕಷ್ಟವಾಗುತ್ತದೆ. ಆದರೂ ಅಂತಾರಾಷ್ಟ್ರೀಯ ಸಂಸ್ಥೆಗಳ ಸಹಕಾರ ಹಾಗೂ ಅಗತ್ಯವಿದ್ದರೆ ಕೇಂದ್ರ ಸರ್ಕಾರದ ನೆರವಿನಿಂದ ತನಿಖೆಯನ್ನು ಚುರುಕುಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಇದೇ ವೇಳೆ ಮೇಕೆದಾಟು ಯೋಜನೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವೇ ಅಂತಿಮವಾಗಿದ್ದು, ಯಾವುದೇ ವ್ಯಕ್ತಿಗತ ಹೇಳಿಕೆಗಳು ಪ್ರಾಮುಖ್ಯತೆ ಹೊಂದುವುದಿಲ್ಲ ಎಂದರು.
ಸಮುದ್ರಕ್ಕೆ ಹರಿದು ಹೋಗುವ ಹೆಚ್ಚುವರಿ ಕಾವೇರಿ ನೀರನ್ನು ಬಳಸಿಕೊಳ್ಳಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಅದರಂತೆ ರಾಜ್ಯದ ರೈತರು ಹಾಗೂ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯ ಪೂರೈಸಲು ಮೇಕೆದಾಟು ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇಸ್ರೋ ಕಚೇರಿಗೆ ಬಂದಿದ್ದ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಸಿಐಎಸ್‌ಎಫ್ ಮತ್ತು ಪೊಲೀಸರು ಸ್ಥಳದಲ್ಲಿ ತಪಾಸಣೆ ನಡೆಸಿದ್ದು, ಯಾವುದೇ ಶಂಕಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.



