ಮೈಸೂರು: ಮೈಸೂರಿನ ಜೆಎಸ್‌ಎಸ್ ದಂತ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕಿಯಾಗಿರುವ ೫೯ ವಯಸ್ಸಿನ ಉಷಾ ಹೆಗ್ಡೆ ಮೌಂಟ್ ಎವರೆಸ್ಟ್ ಪರ್ವತವನ್ನು ಏರಿ ಗಮನ ಸೆಳೆದಿದ್ದು, ಎವರೆಸ್ಟ್ ಏರಿದ ಕರ್ನಾಟಕದ ಹಿರಿಯ ವಯಸ್ಸಿನ ಮೊದಲ ಮಹಿಳೆಯಾಗಿ ಗುರುತಿಸಿಕೊಂಡಿದ್ದಾರೆ.
ಮೂರು ವರ್ಷದಿಂದ ತಯಾರಿ ನಡೆಸಿದ ಅವರು, ಜಿಮ್‌ನಲ್ಲಿ ಸಾಕಷ್ಟು ಕಸರತ್ತು ನಡೆಸಿ ಬೆನ್ನಿನಲ್ಲಿ ೧೪ ಕೆ.ಜಿ ಭಾರ ಹೊತ್ತು ವಾರದಲ್ಲಿ ೩-೪ ದಿನ ಚಾಮುಂಡಿ ಬೆಟ್ಟ ಹತ್ತಿ, ಇಳಿಯುತ್ತಿದ್ದರು. ವಾರದಲ್ಲಿ ೩ ದಿನ ಐದು ಗಂಟೆ ಕಾಲ ನಡೆಯುತ್ತಿದ್ದರು. ಏಕಾಗ್ರತೆಗಾಗಿ ಪ್ರಾಣಾಯಾಮದಲ್ಲೂ ತೊಡಗಿದ್ದರು. ಜಮ್‌ಶದ್‌ಪುರದಲ್ಲಿನ ಟಾಟಾ ಸ್ಟೀಲ್ ಅಡ್ವೆಂಚರ್ ಫೌಂಡೇಷನ್‌ನಲ್ಲಿ ತಾಂತ್ರಿಕ ತರಬೇತಿಯನ್ನೂ ಪಡೆದರು. ಅಲ್ಲಿ, ಬಚೇಂದ್ರಿ ಪಾಲ್ ಅವರಿಗೆ ಹೆಚ್ಚಿನ ಧೈರ್ಯ ತುಂಬಿದರು. ಮೈಸೂರಿನಿಂದ ಕಠ್ಮಂಡು ಮೂಲಕ ಏ.೬ರಂದು ಲುಕ್ಲಾಕ್ಕೆ ತಲುಪಿ ಮೇ.೧ರ ವರೆಗೆ ತರಬೇತಿ ಪಡೆದರು. ಮೇ.೧೩ಕ್ಕೆ ಬೇಸ್ ಕ್ಯಾಂಪ್‌ನಿಂದ ಪರ್ವತಾರೋಹಣ ಆರಂಭಿಸಿ ಮೇ.೧೯ರಂದು ಬೆಳಿಗ್ಗೆ ೬ಕ್ಕೆ ತುದಿ ತಲುಪಿದರು. `ಬೇಸ್ ಕ್ಯಾಂಪ್‌ನಿಂದ ತುದಿ ತಲುಪಲು ೫೬ ಗಂಟೆ ಬೇಕಾಯಿತು.