Saturday, April 19, 2025
Google search engine

Homeರಾಜ್ಯಸುದ್ದಿಜಾಲಯುವ ನಿಧಿಯಡಿ ದೊರಕುವ ನಿರುದ್ಯೋಗ ಭತ್ಯೆಯನ್ನು ಸದುಪಯೋಗಪಡಿಸಿಕೊಳ್ಳಿ: ಶೇಖ್ ತನ್ವೀರ್ ಆಸಿಫ್

ಯುವ ನಿಧಿಯಡಿ ದೊರಕುವ ನಿರುದ್ಯೋಗ ಭತ್ಯೆಯನ್ನು ಸದುಪಯೋಗಪಡಿಸಿಕೊಳ್ಳಿ: ಶೇಖ್ ತನ್ವೀರ್ ಆಸಿಫ್

ಮಂಡ್ಯ : ಆರ್ಥಿಕ ಸಂಕಷ್ಟದ ನಡುವೆ ಕನಸಿನ ಉದ್ಯೋಗದ ಹುಡುಕಾಟದಲ್ಲಿರುವ ನಿರುದ್ಯೋಗಿ ಯುವಜನರು ಯುವನಿಧಿ ಯೋಜನೆಗೆ ನೊಂದಾಯಿಸಿಕೊಳ್ಳುವ ಮೂಲಕ ಸದುಪಯೋಗ ಪಡೆಯಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಅವರು ತಿಳಿಸಿದರು.

ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಯುವನಿಧಿ ನೊಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಡಿಪ್ಲೊಮಾ ಅಥವಾ ಪದವಿ ಮುಗಿದ ನಂತರ ತಕ್ಷಣ ಉದ್ಯೋಗ ಸಿಗುವುದು ಕಷ್ಟಕರವಾಗಿರುತ್ತದೆ. ಯುವ ನಿಧಿಯಡಿ ದೊರಕುವ ನಿರುದ್ಯೋಗ ಭತ್ಯೆಯನ್ನು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು, ಕೌಶಲ್ಯ ತರಬೇತಿ ಪಡೆಯಲು, ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧವಾಗಲು ಪುಸ್ತಕ ಖರೀದಿಗಾಗಿ ಉಪಯೋಗಿಸಿ ಎಂದರು. ೨೦೨೨- ೨೩ನೇ ಶೈಕ್ಷಣಿಕ ಸಾಲಿನ ೨೦೨೩ರಲ್ಲಿ ಪದವಿ ಅಥವಾ ಡಿಪ್ಲೋಮೋ ಉತ್ತೀರ್ಣರಾದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಇವರಲ್ಲಿ ಪದವಿ/ಡಿಪ್ಲೊಮಾ ನಂತರ ಕನಿಷ್ಟ ೬ ತಿಂಗಳ ಅವಧಿಯವರೆಗೆ ಸರ್ಕಾರಿ/ಖಾಸಗಿ ಉದ್ಯೋಗ ಹೊಂದಿಲ್ಲದವರು.

ಸ್ವಯಂ ಉದ್ಯೋಗ ಹೊಂದಿಲ್ಲದವರು. ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು. ಕರ್ನಾಟಕದಲ್ಲಿ ವಾಸವಿರುವ (ಕನಿಷ್ಟ ೬ ವಷದೊಳಗೆ ಪದವಿ/ಡಿಪ್ಲೊಮಾದವರೆಗೆ ಅಧ್ಯಯನ ಮಾಡಿದವರು) ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಎಂದರು.
ಜಿಲ್ಲೆಯಲ್ಲಿರುವ ವಿವಿಧ ಕಾಲೇಜಿನ ಪ್ರಾಂಶುಪಾಲರು ತಮ್ಮಲ್ಲಿ ವಿದ್ಯಾರ್ಥಿಗಳ ಮಾಹಿತಿ ಲಭ್ಯವಿದ್ದು, ಎಲ್ಲರಿಗೂ ಯುವ ನಿಧಿ ಯೋಜನೆಯ ಮಾಹಿತಿ ನೀಡಿ ನೊಂದಾಯಿಸಲು ಸಹಕರಿಸಿ ಎಂದರು. ಅಪರ ಜಿಲ್ಲಾಧಿಕಾರಿ ಡಾ: ಹೆಚ್. ಎಲ್ ನಾಗರಾಜು ಅವರು ಮಾತನಾಡಿ ಅರ್ಹರು ಉಚಿತವಾಗಿ ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ, https:// sevasindhu.karnataka.gov.in  ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ ೧೮೦೦ ೫೯೯ ೯೯೧೮ ಅನ್ನು ಸಂಪರ್ಕಿಸಬಹುದಾಗಿದೆ ಎಂದರು. ಜಿಲ್ಲೆಯಲ್ಲಿ ನೊಂದಾಯಿಸಿಕೊಳ್ಳಲು ಅರ್ಹತೆ ಹೊಂದಿರುವವರು ೧೦,೦೦೦ ದಿಂದ ೧೨,೦೦೦ ಅಭ್ಯರ್ಥಿಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಬಿಟ್ಟು ಹೋಗದಂತೆ ನೋಡಿಕೊಳ್ಳಿ ಎಂದರು. ಕಾಲೇಜು ಅಥವಾ ಗ್ರಾಮಗಳಲ್ಲಿ ನೊಂದಾಯಿಸಿಕೊಳ್ಳಲು ಅಭ್ಯರ್ಥಿಗಳನ್ನು ಗುರುತಿಸಿ ಒಟ್ಟುಗೂಡಿಸಿದರೆ ನೊಂದಣಿಗೆ ಶಿಬಿರವನ್ನು ಸಹ ಆಯೋಜಿಸಿಕೊಡಲಾಗುವುದು ಎಂದರು.

ಯುವನಿಧಿ ಯೋಜನೆಗೆ ನೊಂದಣಿಗೆ ಆಧಾರ್ ಕಾರ್ಡ್, ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಎಸ್ ಎಸ್ ಎಲ್ ಸಿ, ಪಿಯುಸಿ ಅಂಕಪಟ್ಟಿ, ಪದವಿ/ಡಿಪ್ಲೊಮೊ ಪ್ರಮಾಣ ಪತ್ರ(ಕಾನ್ವಕೇಷನ್) ಅಥವಾ ತಾತ್ಕಾಲಿಕ ಪದವಿ/ ಡಿಪ್ಲೊಮೊ ಪ್ರಮಾಣ ಪತ್ರ(ಪಿಡಿಸಿ), ಸಾಮಾನ್ಯ ಪ್ರವೇಶ ಪರೀಕ್ಷೆಯ(ಸಿಇಟಿ) ನೋಂದಣಿ ಸಂಖ್ಯೆ, ೨೦೧೭ ಕ್ಕೂ ಹಿಂದಿನ ಪಡಿತರ ಚೀಟಿ. (ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್) ನೀಡಿದ ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಒಂದು ವೇಳೆ ಎಸ್‌ಎಸ್‌ಎಲ್‌ಸಿ ನಂತರ ನೇರವಾಗಿ ಡಿಪ್ಲೊಮೊಗೆ ಸೇರ್ಪಡೆಗೊಂಡು ತೇರ್ಗಡೆಯಾಗಿದ್ದರೆ, ಅಂತಹ ವಿದ್ಯಾರ್ಥಿಗಳು ೭ನೇ ತರಗತಿ, ೮ನೇ ತರಗತಿ, ೯ನೇ ತರಗತಿ ಮತ್ತು ೧೦ನೇ ತರಗತಿ ಅಂಕಪಟ್ಟಿ ಅವಶ್ಯವಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಯುವನಿಧಿ ಕುರಿತು ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಂ ಬಾಬು,ಯೋಜನಾ ನಿರ್ದೇಶಕರಾದ ಸಂಜೀವಪ್ಪ, ಮುಖ್ಯ ಯೋಜನಾಧಿಕಾರಿ ಧನುಷ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ನಾಗನಂದ ಆರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್. ಎಚ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular