ಚಿತ್ರದುರ್ಗ: ಎರಡನೇ ಸುತ್ತಿನ ಮಿಷನ್ ಇಂದ್ರ ಧನುಷ್ ಲಸಿಕಾ ಅಭಿಯಾನವನ್ನು ಯೋಜಿತ ಗುರಿಗಳಂತೆ ಸಾಧನೆ ಸಾಧಿಸಲು ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ ಯಶಸ್ವಿಯಾಗಿ ನಡೆಸಿ, ಲಸಿಕಾ ವಂಚಿತರಿಗೆ ಲಸಿಕೆ ನೀಡಿ ಎಂದು ತಹಶೀಲ್ದಾರ್ ಡಾ.ನಾಗವೇಣಿ ಹೇಳಿದರು.
ಚಿತ್ರದುರ್ಗ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗುರುವಾರ ಆರೋಗ್ಯ ಇಲಾಖೆಯ ಮಿಷನ್ ಇಂದ್ರಧನುಷ್ 5.0 ಎರಡನೇ ಸುತ್ತಿನ ತಾಲ್ಲೂಕು ಚಾಲನಾ ಸಮಿತಿ ಸಭೆ ಮತ್ತು ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದ ಎರಡನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿ ಕಾಲಕಾಲಕ್ಕೆ ಸರಿಯಾಗಿ ತಾಲ್ಲೂಕಿನ ಎಲ್ಲಾ ಅಂಗನವಾಡಿ ಮತ್ತು ಶಾಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ವರದಿ ಸಲ್ಲಿಸಿ ಎಂದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಜಯಶ್ರೀ ಮಾತನಾಡಿ, ಮಿಷನ್ ಇಂದ್ರಧನುಷ್ 5.0 ಲಸಿಕಾ ಕಾರ್ಯಕ್ರಮದಲ್ಲಿ 197 ಗರ್ಭಿಣಿಯರನ್ನು, 671 ಮಂದಿ ಎರಡು ವರ್ಷದ ಒಳಗಿನ ಮಕ್ಕಳನ್ನು ಈಗಾಗಲೇ ಗುರುತಿಸಿ ಹೈ ರಿಸ್ಕ್ ಏರಿಯಾಗಳನ್ನು ಗುರುತಿಸಿ, ತಾಲ್ಲೂಕಿನಲ್ಲಿ ಒಟ್ಟು 124 ಲಸಿಕಾ ಅಧಿವೇಶನಗಳನ್ನು ನಡೆಸಲು ಕ್ರಿಯಾ ಯೋಜನೆ ತಯಾರಿಸಲಾಗಿದೆ.ಅದರಂತೆ ಕಾರ್ಯಕ್ರಮ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಸಭೆಯ ಸಹಕಾರ ಕೋರಿದರು.
ಸಭೆಯಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಧಾ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪ್ರದೀಪ್ ಕುಮಾರ್, ತಾಲ್ಲೂಕು ಯೋಜನಾಧಿಕಾರಿ ರಾಘವೇಂದ್ರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಆರ್.ಗೌರಮ್ಮ, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದ ಡಾ.ಮಹೇಂದ್ರ ಕುಮಾರ್, ಡಾ.ಸುಪ್ರೀತಾ, ಡಾ.ವಾಣಿ, ಡಾ. ಮಂಜುಳಾ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಹಿರಿಯ ಆರೋಗ್ಯ ಸುರಕ್ಷತಾ ಅಧಿಕಾರಿ ಕಾತ್ಯಾಯನಮ್ಮ, ತಾಲ್ಲೂಕು ವ್ಯವಸ್ಥಾಪಕ ಅಲಿ ಹಬೀಬ್ ಇದ್ದರು.