ಬಳ್ಳಾರಿ: ಬಾಲ್ಯದಲ್ಲಿ ಕಾಡುವ 12 ಮಾರಕ ರೋಗಗಳನ್ನು ತಡೆಗಟ್ಟಲು ವಯಸ್ಸಿನ ಅನುಸಾರ ಮಕ್ಕಳಿಗೆ ನೀಡುವ ಎಲ್ಲ ಲಸಿಕೆಗಳನ್ನು ತಪ್ಪದೇ ಹಾಕಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶಬಾಬು ತಿಳಿಸಿದರು.
ನಗರದ ಬಂಡಿಹಟ್ಟಿ ಪ್ರದೇಶದ ತುಂಗಭದ್ರಾ ಕಾಲುವೆ ಹತ್ತಿರದ ಬೆಳಗಲ್ ಕ್ರಾಸ್ 3ನೇ ಏರಿಯಾದಲ್ಲಿ ಅವಳಿ-ಜವಳಿ ಮಕ್ಕಳು ಜನಿಸಿದ ಮನೆಗೆ ಭೇಟಿ ನೀಡಿ, ತಾಯಿ ಮತ್ತು ಮಗುವಿನ ಆರೋಗ್ಯವನ್ನು ವಿಚಾರಿಸಿ, ಅವರು ಸಲಹೆ ನೀಡಿದರು. ಅವಳಿ ಮಕ್ಕಳನ್ನು ಬೆಚ್ಚಗಿಡುವ ಮತ್ತು ಎದೆ ಹಾಲುಣಿಸಲು ಪಾಲಕರು ಬೆಂಬಲ ನೀಡುವಂತೆ ತಿಳಿಸಿ, ಪ್ರಸ್ತುತ ಅ. 09 ರಿಂದ 14 ರ ವರೆಗೆ ಇಂದ್ರಧನುಷ್ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ವಂಚಿತವಾದ, ಲಸಿಕೆ ತಪ್ಪಿದ, ಬಿಟ್ಟು ಹೋದ ಮಕ್ಕಳಿಗೆ ಲಸಿಕೆಗಳನ್ನು ಹಾಕಲಾಗುತ್ತಿದ್ದು, ತಮ್ಮ ಮಕ್ಕಳಿಗೂ ಲಸಿಕೆ ಹಾಕಿಸಿ ಎಂದು ವಿನಂತಿಸಿದರು. ತಾಯಂದಿರು ತಮ್ಮ ಮಕ್ಕಳಿಗೆ ಹುಟ್ಟಿನಿಂದ ಐದು ವರ್ಷದಲ್ಲಿ ಏಳು ಬಾರಿ ಮಕ್ಕಳಿಗೆ ಲಸಿಕೆ ಹಾಕಿಸಲು ಆಸ್ಪತ್ರೆಗೆ ಬರುವುದನ್ನು ಮರೆಯಬೇಡಿ ಎಂದರು.
ಮುಖ್ಯವಾಗಿ 12 ಮಾರಕ ರೋಗಗಳ ವಿರುದ್ಧ ನೀಡುವ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು, ಎಲ್ಲಾ ಲಸಿಕೆಗಳನ್ನು ಮಗುವಿನ ಒಂದು ವರ್ಷದೊಳಗೆ ಹಾಕಲಾಗುವುದು ಎಂದು ತಿಳಿಸಿದ ಅವರು, ಕೆಲವು ರೋಗಗಳಿಗೆ ಪೋಲಿಯೋ, ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ದಡಾರ-ರೂಬೆಲ್ಲಾ ಮೆದುಳು ಜ್ವರಕ್ಕೆ 16 ರಿಂದ 23 ತಿಂಗಳು ಒಳಗೆ ಹೆಚ್ಚುವರಿಯಾಗಿ ಬೂಸ್ಟರ್ ಡೋಸ್ ರೂಪದಲ್ಲಿ ನೀಡಲಾಗುವುದು, 5 ರಿಂದ 6 ವರ್ಷದಲ್ಲಿ ಪುನಃ ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ರೋಗಿಗಳಿಗೆ ಎರಡನೇಯ ಬಾರಿ ಬೂಸ್ಟರ್ ಡೋಸ್ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ, ಪ್ರಾಥಮಿಕ ಸುರಕ್ಷಾಧಿಕಾರಿ ಶಾರದಾ, ಆಶಾ ಕಾರ್ಯಕರ್ತೆ ಹಾಗೂ ತಾಯಂದಿರು, ಪಾಲಕರು ಉಪಸ್ಥಿತರಿದ್ದರು.