Saturday, April 19, 2025
Google search engine

Homeಸ್ಥಳೀಯಸಮಾಜದ ಪರಿವರ್ತನೆಗೆ ವಚನ ಚಳವಳಿ ಪ್ರೇರಣೆ

ಸಮಾಜದ ಪರಿವರ್ತನೆಗೆ ವಚನ ಚಳವಳಿ ಪ್ರೇರಣೆ


ಮೈಸೂರು: ಶೋಷಿತರು, ಮಹಿಳೆಯರು ಮುಖ್ಯ ವಾಹಿನಿಗೆ ಬರಲು ವಚನ ಚಳವಳಿಯೇ ಪ್ರೇರಣೆ ಎಂದು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ನಗರ ಘಟಕ ಹಾಗೂ ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಆಧುನಿಕ ವಚನ ಕವಿಗೋಷ್ಠಿ ಎಂಬ ದತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,
೧೨ನೇ ಶತಮಾನದ ವಚನ ಚಳವಳಿ ಚರಿತ್ರಾರ್ಹವಾದುದು. ನಾಡಿನ ಸಾಂಸ್ಕೃತಿಕ, ಸಾಹಿತ್ಯಿಕ, ಸಾಮಾಜಿಕ ಪರಿವರ್ತನೆಗೆ ಮತ್ತು ಸಮಾಜದ ಶೋಷಿತರು ಹಾಗೂ ಮಹಿಳೆಯರನ್ನು ಮುಖ್ಯವಾಹಿನಿಗೆ ತರಲು ವಚನ ಚಳುವಳಿಯೇ ಮೂಲವಾಗಿದೆ, ಹಾಗಾಗಿ ಇಂದು ವಚನಗಳ ಪ್ರಸ್ತುತತೆ ಮುಖ್ಯವಾಗಿದೆ ಎಂದರು.
ಶಿಕ್ಷಣ ಮತ್ತು ಸಾಹಿತ್ಯ ಕೆಲವರಿಗೆ ಮೀಸಲಾಗಿದ್ದು ಎಲ್ಲಾ ವರ್ಗದವರನ್ನು ಹೊಸ ಅಧ್ಯಾಯ ಸೃಷ್ಟಿಗೆ ನಾಂದಿ ಹಾಡಿ ವೈಚಾರಿಕ ಕ್ರಾಂತಿ ಉಂಟುಮಾಡಿದುದು ವಚನ ಚಳವಳಿ, ಈ ವಚನಗಳು ಕನ್ನಡದ ನಿಜವಾದ ಅಸ್ಮಿತೆಯಾಗಿ ಅರ್ಥಪೂರ್ಣ ಬದುಕನ್ನು ಕಟ್ಟಲು ಹಾಗೂ ಮಾನವನ ಸಾರ್ಥಕತೆಗೆ ಸಾಕ್ಷಿಯಾಗಿದೆ ಎಂದರು.
ಕಲೆ, ಸಾಹಿತ್ಯ, ಸಂಗೀತ ರಂಗಭೂಮಿಯು, ಮಾನವರ ಬದುಕಿನ ಒತ್ತಡಗಳನ್ನು ನಿವಾರಿಸುವುದಲ್ಲದೆ ಸೃಜನಶೀಲತೆಗೆ ಕಾರಣವಾಗಿದೆ. ಕನ್ನಡ ನೆಲಮೂಲ ಶ್ರಮಸಂಸ್ಕೃತಿಯ ಜನಪದ ಸಾಹಿತ್ಯ ಮತ್ತು ವಚನ ಸಾಹಿತ್ಯ ವಿಶ್ವಸಾಹಿತ್ಯಕ್ಕೆ ನೀಡಿದ ಕೊಡುಗೆಗಳಾಗಿವೆ. ಆಧುನಿಕ ವಚನ ಸಾಹಿತ್ಯಕ್ಕೆ ಫ.ಗು.ಹಳಕಟ್ಟಿ, ಭೂಸನೂರುಮಠ, ಜಯದೇವಿತಾಯಿ ಲಿಗಾಡೆ, ಆರ್. ದಿವಾಕರ್, ಕುವೆಂಪು, ಬೇಂದ್ರೆ, ಸಿದ್ಧಯ್ಯಪುರಾಣಿಕ, ಎಸ್.ವಿ.ರಂಗಣ್ಣ, ಕಮಲಾ ಹಂಪನಾ ಮುಂತಾದ ಕವಿಗಳ ಕೊಡುಗೆ ಇದೆ. ಭವದ ಕೇಡಿಗೆ ವಚನಗಳು ಬೇಕು. ಜ್ಞಾನವೇ ಸತ್ಯ, ಅನುಭವದ ನೆಲೆಯಲ್ಲಿ ಮಾತು ಹಿತವಾಗಿರಬೇಕು. ಊಟಮಿತವಾಗಿರಬೇಕು ಎಂದು ಅವರು ಹೇಳಿದರು.
೨೨ ಕವಿಗಳಿಂದ ಕವನ ವಾಚನ: ೨ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ಸಮಾಜ, ಸರ್ಕಾರದ ಗ್ಯಾರಂಟಿಗಳು, ದೈವ, ತಾಯಿ, ಬಡತನ, ಸಾಧನೆ, ಅಂತರಂಗ ಶುದ್ಧಿ, ಮರುಳಬಂಧ, ಮಹಿಳೆಯರನ್ನು ಕುರಿತ ವೈವಿಧ್ಯಮಯವಾದ ವಚನಗಳನ್ನು ವಾಚಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ನಗರ ಘಟಕದ ಅಧ್ಯಕ್ಷ ಮ.ಗು.ಸದಾನಂದಯ್ಯ ಅಧ್ಯಕ್ಷತೆ ವಹಿಸಿದ್ದರು. ಭಾಗವಹಿಸಿದ ಕವಿಗಳಿಗೆ ಶ್ರೀ ನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ. ಎಸ್. ಶಿವರಾಜಪ್ಪ ಪ್ರಶಸ್ತಿ ಪತ್ರ ಪ್ರದಾನ ಮಾಡಿದರು.
ಹೊಸಮಠದ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು, ಹರದನಹಳ್ಳಿ ಕಂಚಿಮಲ್ಲಪ್ಪ ದತ್ತಿ ದಾಸೋಹಿಗಳಾದ ಮಂಗಳ ಮುದ್ದುಮಾದಪ್ಪ, ನಟರಾಜ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದಾ, ಉಪ ಪ್ರಾಂಶುಪಾಲ ಡಾ.ಜಿ.ಪ್ರಸಾದಮೂರ್ತಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಉಪಸ್ಥಿತರಿದ್ದರು.
ಮೇಘನಾ, ಮಮತಾ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಎಂ.ಎಸ್. ಸಂಧ್ಯಾರಾಣಿ ನಿರೂಪಿಸಿದರು. ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಮ.ಗು. ಸದಾನಂದಯ್ಯ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿ ದಿವ್ಯಾ ವಂದಿಸಿದರು.

RELATED ARTICLES
- Advertisment -
Google search engine

Most Popular