ಮೈಸೂರು: ನಾಳೆ ನಾಡಿನಾದ್ಯಂತ ವೈಕುಂಠ ಏಕಾದಶಿ ಸಂಭ್ರಮ. ಈ ಹಿನ್ನೆಲೆಯಲ್ಲಿ ಮೈಸೂರಿನ ವೈಷ್ಣವ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯ ನೆರವೇರಲಿದೆ.
ನಗರದ ಹಲವು ವಿಷ್ಣು ದೇವಾಲಯಗಳಲ್ಲಿ ಮುಂಜಾನೆಯಿಂದಲೇ ಪೂಜೆ ಪುನಸ್ಕಾರ ಆರಂಭವಾಗಲಿದೆ. ಸ್ವರ್ಗದ ಬಾಗಿಲು ತೆರೆಯುವ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಕೆಯಾಗಲಿದೆ. ನಗರದ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ಭರದ ಸಿದ್ದತೆ ನಡೆಸಲಾಗುತ್ತಿದ್ದು ಮುಂಜಾನೆ 4 ಗಂಟೆಯಿಂದಲೇ ಪೂಜಾ ಕೈಂಕರ್ಯ ಆರಂಭವಾಗಲಿದೆ. ಮಹಾ ಮಂಗಳಾರತಿ, ಉತ್ಸವ ಮೂರ್ತಿ ಮೆರವಣಿಗೆ ಮೂಲಕ ಸ್ವರ್ಗದ ಬಾಗಿ ತೆರಯುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ದೇವಾಲಯದ ಅರ್ಚಕರು ಮಾಹಿತಿ ನೀಡಿದರು.
ಮುಂಜಾನೆ 5 ಗಂಟೆಗೆ ಸ್ವರ್ಗದ ಬಾಗಿಲು ತೆರೆಯಲು ವಿಶೇಷ ಪೂಜಾ ಪುನಸ್ಕಾರ ನೆರವೇರಲಿದ್ದು, ಸರದಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೂ ಪ್ರಸಾದ ವಿನಿಯೋಗವಿರಲಿದೆ.