ಬೆಂಗಳೂರು: ರಾಜ್ಯದಾದ್ಯಂತ ವೈಕುಂಠ ಏಕಾದಶಿಯ ಸಂಭ್ರಮ ಮನೆ ಮಾಡಿದೆ. ನಗರದ ಹಲವು ವಿಷ್ಣು, ವೆಂಕಟೇಶ್ವರ, ಗೊವಿಂದನ ದೇವಾಲಯಗಳಲ್ಲಿ ಮುಂಜಾನೆ 4 ಗಂಟೆಯಿಂದಲೇ ಸುಪ್ರಭಾತ ಸೇವೆ ವಿಶೇಷ ಪೂಜೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ಭಕ್ತರ ಸಾಗರ ಹರಿದು ಬರುತ್ತಿದೆ.
ಅರಸೀಕೆರೆ ಮಲೇಕಲ್ಲು ಅಮರಗಿರಿ ತಿರುಪತಿ ದೇವಾಲಯ, ಮಾಲೂರಿನ ಚಿಕ್ಕತಿರುಪತಿ, ಮೈಸೂರು, ಬೆಳಗಾವಿ ಹುಬ್ಬಳ್ಳಿ ,ಚಿಕ್ಕಮಗಳೂರು, ಹಾಸನ, ಶೀರಂಗಪಟ್ಟಣದ ರಂಗನಾಥ ಸೇರಿದಂತೆ ರಾಜ್ಯಾದ್ಯಂತ ಸಾವಿರಾರು ದೇಗುಲದಲ್ಲಿ ಪಂಚಾಭಿಷೇಕ, ಪುಷ್ಪಭಿಷೇಕ ಸೇರಿದಂತೆ ವಿವಿಧ ಪೂಜೆ ನಡೆಯುತ್ತಿದ್ದು, ವಿಶೇಷ ಅಲಂಕಾರ ಮಾಡಿ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಇನ್ನು ಬೆಂಗಳೂರಿನ ಮಲ್ಲೇಶ್ವರಂ ಹಾಗು ಜೆಪಿ ನಗರದ ಟಿಟಿಡಿ ದೇವಸ್ಥಾನದಲ್ಲಂತೂ ಸಂಭ್ರಮ ಮುಗಿಲುಮುಟ್ಟಿದೆ. ವೈಕುಂಠ ಏಕಾದಶಿ ಪ್ರಯುಕ್ತವಾಗಿಯೇ ದೇವಸ್ಥಾನದ ಸುತ್ತಲೂ ಚಪ್ಪರ ಹಾಕಿ ಹೂವಿನಿಂದ ಅಲಂಕಾರ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಭಕ್ತರು ಆಗಮಿಸಿ ವೆಂಕಟೇಶ್ವರನ ದರ್ಶನ ಪಡೆಯುತ್ತಿದ್ದಾರೆ.
ದೇಗುಲಕ್ಕೆ ಬಂದ ಭಕ್ತರಿಗೆ ಪ್ರಸಾದ ವಿತರಣೆ ನಡೆಯುತ್ತಿದ್ದು, ಇಂದು ದೇವಸ್ಥಾನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಬರುವ ನಿರೀಕ್ಷೆ ಇದ್ದು, ನೂಕು ನುಗ್ಗಲಾಗದಂತೆ ದೇವಸ್ಥಾನದ ಸುತ್ತಲೂ ಬ್ಯಾರೀಕೇಟ್ ಅಳವಡಿಸಲಾಗಿದೆ.