ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಂಕನಾಡಿ ಜಂಕ್ಷನ್‌ನಿಂದ ನಂದಿಗುಡ್ಡೆ ಸಂಪರ್ಕಿಸುವ ವೆಲೆನ್ಸಿಯಾ ರಸ್ತೆ ದಿನನಿತ್ಯ ವಾಹನ ಸವಾರರಿಗೆ, ತೊಂದರೆಯನ್ನುಂಟು ಮಾಡುತ್ತಿದೆ. ಇದೀಗ ಮತ್ತೆ ಇಲ್ಲಿ ಕಾಂಕ್ರಿಟ್ ರಸ್ತೆಯನ್ನು ಅಗೆದು ನೀರಿನ ಪೈಪ್ ದುರಸ್ತಿ ಪಡಿಸುವ ಕಾಮಗಾರಿ ನಡೆಸಲಾಗುತ್ತಿದೆ. ಇಲ್ಲಿ ಅಗೆದ ಗುಂಡಿಯನ್ನು ಸರಿಯಾಗಿ ಮುಚ್ಚದ ಕಾರಣ ಭಾನುವಾರ ರಾತ್ರಿ ಇಲ್ಲಿನ ಹೊಂಡಕ್ಕೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಂಭೀರ ಗಾಯಗೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಸೋಮವಾರ ಬೆಳಿಗ್ಗೆ ಪಾಲಿಕೆಯ ಅಧಿಕಾರಿಗಳ ಸಹಿತ ಘಟನೆ ನಡೆದ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಂಗಳೂರು ಮಹಾನಗರ ಪಾಲಿಕೆಯ ಪಡೀಲ್ ಮದರ್ ಟ್ಯಾಂಕ್‌ನಿಂದ ಹೋಗುವ ನೀರು ಸರಬರಾಜು ಕೊಳವೆಯಲ್ಲಿ ಇರುವ ಲೀಕೇಜ್ ಸರಿಪಡಿಸಲು ಕಾಂಕ್ರಿಟ್ ರಸ್ತೆಯನ್ನು ಕಟ್ ಮಾಡಿ ದುರಸ್ತಿ ಪಡಿಸುವ ಕೆಲಸ ಮಾಡಲಾಗುತ್ತಿತ್ತು. ಆದರೆ ರಾತ್ರಿ ಮಳೆ ಬಂದ ಕಾರಣ ಗುಂಡಿಯನ್ನು ಸರಿಯಾಗಿ ಮುಚ್ಚದ ಕಾರಣ, ಇಲ್ಲಿ ಬ್ಯಾರಿಕೇಡ್ ಅಳವಡಿಸಿ ಸೂಚನೆ ಹಾಕಿದ್ದರು. ಆದರೆ ರಿಕ್ಷಾ ಚಾಲಕರೊಬ್ಬರು ಬ್ಯಾರಿಕೇಡ್‌ಗೆ ಹಾನಿ ಮಾಡಿದ್ದಾರೆ, ಬಳಿಕ ದ್ವಿಚಕ್ರ ವಾಹನ ಸವಾರರೊಬ್ಬರಿಗೆ ಇಲ್ಲಿನ ಗುಂಡಿ ಅರಿವಿಲ್ಲದೇ ಅದಕ್ಕೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಎಂದರು.
