Friday, April 4, 2025
Google search engine

Homeರಾಜಕೀಯಶ್ರೀರಾಮುಲುಗೆ ರಾಜ್ಯಸಭಾ ಸದಸ್ಯತ್ವ ನೀಡುವಂತೆ ವಾಲ್ಮೀಕಿ ಸಮುದಾಯ ಒತ್ತಾಯ

ಶ್ರೀರಾಮುಲುಗೆ ರಾಜ್ಯಸಭಾ ಸದಸ್ಯತ್ವ ನೀಡುವಂತೆ ವಾಲ್ಮೀಕಿ ಸಮುದಾಯ ಒತ್ತಾಯ

ಬೆಂಗಳೂರು: ವಾಲ್ಮಿಕಿ ಸಮುದಾಯದ ನಾಯಕರಾದ ಶ್ರೀರಾಮುಲು ಅವರಿಗೆ ಬಿಜೆಪಿಯು ರಾಜ್ಯಸಭಾ ಸದಸ್ಯತ್ವ ನೀಡಿ, ಕೇಂದ್ರ ಮಂತ್ರಿ ಮಾಡದೇ ಹೋದಲ್ಲಿ ವಾಲ್ಮೀಕಿ ಸಮಯದಾಯವು ಬಿಜೆಪಿಯನ್ನು ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಬೈಕಾಟ್‌ ಮಾಡಬೇಕಾಗುತ್ತದೆ ಎಂದು ವಾಲ್ಮೀಕಿ ಸ್ವಾಭಿಮಾನಿ ಸಂಘದ ರಾಜ್ಯಾಧ್ಯಕ್ಷ ಚಳುವಳಿ ರಾಜಣ್ಣ ಎಚ್ಚರಿಕೆ ನೀಡಿದರು. ವಾಲ್ಮಿಕಿ ಸ್ವಾಭಿಮಾನಿ ಸಂಘ, ಜೈಭೀಮ್‌ ಅಖಿಲ ಭಾರತ ದಲಿತ ಹೋರಾಟ ಸಮಿತಿ, ಶ್ರೀರಾಮುಲು ಅಭಿಮಾನಿ ಬಳಗ ಸೇರಿದಂತೆ ಹಲವು ಸಂಘಟನೆಗಳ ಸಹಯೋಗದೊಂದಿಗೆ ಭಾನುವಾರ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬಿಜೆಪಿ ಪಕ್ಷವು ಒಂದು ವಾರದೊಳಗೆ ಜನಾರ್ಧನ ರೆಡ್ಡಿಯನ್ನು ಪಕ್ಷದಿಂದ ಉಚ್ಛಾಟನೆ ಮಾಡದೇ ಹೋದಲ್ಲಿ ಉಗ್ರಹೋರಾಟದ ಬಿಸಿ ಮುಟ್ಟಿಸಲಿದ್ದೇವೆ ಎಂದರು. ಬಿಜೆಪಿಯು ಶ್ರೀರಾಮುಲು ಅವರಿಗೆ ಮಾಡಿದ ಅನ್ಯಾಯಕ್ಕೆ ಪರಿಹಾರವಾಗಿ ಅವರನ್ನು ಕೇಂದ್ರದ ಮಂತ್ರಿ ಮಾಡಲಿ, ಬಿಜೆಪಿಯ ಇತಿಹಾಸದಲ್ಲೇ ವಾಲ್ಮಿಕಿ ಸಮುದಾಯದ ನಾಯಕರೊಬ್ಬರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ ಉದಾಹರಣೆ ಇಲ್ಲ. ಈಗಲಾದರೂ ನಮ್ಮ ಸಮುದಾಯಕ್ಕೆ ನ್ಯಾಯ ಕೊಡಲಿ ಎಂದು ಹೇಳಿದರು.

ಅಸಲಿಗೆ ಸಂಡೂರು ಉಪಚುನಾವಣೆ ಸೋಲಿನ ಹೊಣೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಜನಾರ್ಧನ ರೆಡ್ಡಿ ಹೊರಬೇಕಿತ್ತು. ತಮ್ಮ ತಪ್ಪನ್ನ ಮರೆಮಾಚಲು ಶ್ರೀರಾಮುಲು ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ರಾಮುಲು ಅವರು ಸಂಡೂರಿನಲ್ಲಿ ಪ್ರಚಾರ ಮಾಡದೇ ಹೋಗಿದ್ದರೆ, ಬಿಜೆಪಿ ಬರೀ ಸೋಲಲ್ಲ, ಹೀನಾಯ ಸೋಲು ಅನುಭವಿಸಬೇಕಿತ್ತು. ಇಡೀ ದೇಶದಲ್ಲಿ ೧೫ ಕೋಟಿಗೂ ಹೆಚ್ಚು ಜನಸಂಖ್ಯೆ ಹೊಂದಿರುವ ವಾಲ್ಮಿಕಿ ಸಮುದಾಯವನ್ನೇ ಬಿಜೆಪಿ ಕಡೆಗಣಿಸುತ್ತಿರುವುದು ತಮ್ಮ ವಿನಾಶಕ್ಕೆ ತಾವೇ ದಾರಿ ಮಾಡಿಕೊಳ್ಳುತ್ತಿದೆ. ಜನಾರ್ಧನ ರೆಡ್ಡಿ ನಿರಾಧಾರವಾಗಿ ಆರೋಪ ಮಾಡುತ್ತಿದ್ದರೂ ಬಿಜೆಪಿ ಕೈಕಟ್ಟಿ ಕುಳಿತಿರುವುದು ನಾಚಿಕೆಗೇಡಿನ ವಿಷಯ. ಈ ಧೋರಣೆ ಹೀಗೆ ಮುಂದುವರೆದರೆ, ವಾಲ್ಮಿಕಿ ಸಮಯದಾಯ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಹೇಳಿದರು. ಶ್ರೀರಾಮುಲು ಅವರು ವಾಲ್ಮಿಕಿ ಸಮುದಾಯದ ರಾಷ್ಟ್ರೀಯ ನಾಯಕ, ಈ ಸಮುದಾಯದ ಋಣ ಸಂದಾಯ ಮಾಡದಬೇಕೆಂಬ ಆಶಯವಿದ್ದರೆ, ರಾಮುಲು ಅವರಿಗೆ ಅಧಿಕಾರ ನೀಡಿ ಎಂದು ಆಗ್ರಹಿಸಿದರು.

ಜೈಭೀಮ್‌ ಅಖಿಲ ಭಾರತ ದಲಿತ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎಂ.ಎಂ. ರಾಜು ಮಾತನಾಡಿ, ಎಸ್‌ಸಿ ಹಾಗೂ ಎಸ್‌ಟಿ ಸಮುದಾಯವು ಸದಾ ಸಹೋದರರಂತೆ ಇರುತ್ತಾರೆ. ಎಸ್‌ಟಿ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೆ ಅದನ್ನು ಎಸ್‌ಸಿ ಸಮುದಾಯ ನೋಡಿ ಸುಮ್ಮನೆ ಕೂರಲು ಸಾಧ್ಯವಿಲ್ಲ. ರಾಜ್ಯದ ಸಂಪತ್ತನ್ನು ಲೂಟಿ ಹೊಡೆದು ಜೈಲಿಗೆ ಹೋದ ವ್ಯಕ್ತಿ ಜನಾರ್ಧನ ರೆಡ್ಡಿ ಮಾತನ್ನು ಕೇಳಿ ಕೆಲ ನಾಯಕರು ಪಕ್ಷದ ಕಟ್ಟಾಳಾದ ರಾಮುಲು ಅವರಿಗೆ ಅವಮಾನ ಮಾಡುತ್ತಿರುವುದು ಸರಿಯಲ್ಲ, ಈ ಕೂಡಲೇ ಶ್ರೀರಾಮುಲು ಅವರ ಬಳಿ, ಜನಾರ್ಧನ ರೆಡ್ಡಿ ಹಾಗೂ ಬಿಜೆಪಿ ನಾಯಕರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ವಾಲ್ಮಿಕಿ ಯುವಬ್ರಿಗೇಡ್‌ ಸದಸ್ಯ ಶಿವನಾಯಕ ಮಾತನಾಡಿ, ವಾಲ್ಮಿಕಿ ಹಾಗೂ ದಲಿತ ಸಮುದಾಯಗಳನ್ನು ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಕಡೆಗಣಿಸುತ್ತಲೇ ಬಂದಿದ್ದಾರೆ. ಈ ಸಮುದಾಯದ ನಾಯಕರು ಬೆಳೆಯುವುದು ಆ ಪಕ್ಷದ ನಾಯಕರೇ ಇಷ್ಟವಿದ್ದಂತಿಲ್ಲ. ಬಿಜೆಪಿ ಶ್ರೀರಾಮುಲು ಅವರಿಗೆ ಮಾಡುತ್ತಿರುವ ಅನ್ಯಾಯ ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ಶ್ರೀ ರಾಮುಲು ಅವರ ಸಾಮರ್ಥ್ಯ ಎಲ್ಲರಿಗೂ ತಿಳಿದಿದೆ. ಶಕುನಿ ಬುದ್ದಿ ಹೊಂದಿರುವ ಜನಾರ್ಧನ ರೆಡ್ಡಿಯನ್ನು ಕೂಡಲೇ ಪಕ್ಷದಿಂದ ದೂರವಿಡಿ, ಈಗಾಗಲೇ ಜನಾರ್ಧನ ರೆಡ್ಡಿಯಿಂದ ಬಿಜೆಪಿಯಲ್ಲೇ ಒಳಬಣಗಳು ಸೃಷ್ಟಿಯಾಗುತ್ತಿದ್ದು, ಇವರ ಮಾತನ್ನು ಹೀಗೇ ಕೇಳುತ್ತಾ ಹೋದರೆ, ಬಿಜೆಪಿಯ ಕಟ್ಟಾಳುಗಳು ಪಕ್ಷವನ್ನು ತೊರೆಯಬೇಕಾದ ಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಸಿದರು. ಕಳೆದ ಬಾರಿಯೇ ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡದೇ ಅನ್ಯಾಯ ಮಾಡಿದ್ದಾರೆ, ಇದಕ್ಕಾಗಿ ಕಳೆದ ಚುನಾವಣೆಯಲ್ಲಿ ವಾಲ್ಮಿಕಿ ಸಮುದಾಯು ಬಿಜೆಪಿಯ ಕೈ ಬಿಟ್ಟಿದೆ. ನಮ್ಮ ಸಮುದಾಯದ ನಾಯಕರನ್ನು ಹೀಗೆ ಕಡೆಗಣಿಸುತ್ತಲೇ ಇದ್ದರೆ, ಬಿಜೆಪಿಯು ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಇದೇ ರೀತಿಯ ಹೀನಾಯ ಸೋಲು ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಶ್ರೀರಾಮು ಅಭಿಮಾನಿ ಬಳಗದ ಮುಖಂಡರು ನವೀನ್‌ ಮದಕರಿ , ಡಾ.ಎಂ. ವೆಂಕಟಸ್ವಾಮಿ, ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾದ ಮುನಿಸ್ವಾಮಿ ಪ್ರಗತಿಪರ ಮುಖಂಡರಾದ ಫ್ರೊ. ಹರಿರಾಮ್‌ ಹಾಗೂ ಬಿಜೆಪಿಯು ಪ್ರಮುಖ ಕಾರ್ಯಕರ್ತರು ಹಾಗೂ ದಲಿತ ಮುಖಂಡರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular