ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದ 187 ಕೋಟಿ ರೂಪಾಯಿಯ ಅಕ್ರಮ ಹಣ ವರ್ಗಾವಣೆಯ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕರ್ನಾಟಕ ಹೈಕೋರ್ಟ್, ಎಸ್ಐಟಿಗೆ ಸೂಚನೆ ನೀಡಿದೆ. ಈವರೆಗೆ ಬ್ಯಾಂಕ್ ವ್ಯವಹಾರಗಳ ತನಿಖೆಯಲ್ಲಿ ಸೀಮಿತವಾಗಿದ್ದ ಸಿಬಿಐ, ಇದೀಗ ಸಂಪೂರ್ಣ ಪ್ರಕರಣದ ತನಿಖೆ ನಡೆಸಲಿದೆ.
ಈ ಕುರಿತಂತೆ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಿಂದಲೂ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ಮನವಿ ಆಗಿತ್ತು.
ಹಗರಣದಲ್ಲಿ, ನಿಗಮದ 187 ಕೋಟಿ ರೂ.ಗಳಲ್ಲಿ 94 ಕೋಟಿ ರೂ. ಹೈದರಾಬಾದ್‌ನ ಫಸ್ಟ್ ಬ್ಯಾಂಕ್‌ನಲ್ಲಿ ಇರುವ 18 ನಕಲಿ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಹಣವನ್ನು ನೆಟ್‌ಬ್ಯಾಂಕಿಂಗ್, ಆರ್‌ಟಿಜಿಎಸ್, ಫೋನ್‌ಪೇ, ಗೂಗಲ್‌ಪೇ ಮುಖಾಂತರ ಇನ್ನಷ್ಟು ಖಾತೆಗಳಿಗೆ ವರ್ಗಾಯಿಸಿ, ಸತ್ಯನಾರಾಯಣ ವರ್ಮಾ ಎಂಬ ಮಧ್ಯವರ್ತಿಯ ಮೂಲಕ ಡ್ರಾ ಮಾಡಲಾಗಿತ್ತು.
ಈ ಹಣವನ್ನು ಮಾಜಿ ಸಚಿವ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್, ಆಂಧ್ರದ ನಾಗೇಶ್ವರ್ ರಾವ್ ಜತೆಗೂಡಿ ಹಂಚಿಕೊಂಡಿದ್ದರು. ನಿಗಮದ ಎಂಡಿಯಾಗಿದ್ದ ಪದ್ಮನಾಭಗೆ 5 ಕೋಟಿ ರೂ. ಪಾಲು ಸಿಕ್ಕಿದ್ದು, ಅರ್ಧ ಹಣವನ್ನು ನೆಲಮಂಗಲದ ಸ್ನೇಹಿತನ ಮನೆಯಲ್ಲಿ ಇಡಲಾಗಿತ್ತು. ಅಲ್ಲಿಂದ 3.64 ಕೋಟಿ ಹಾಗೂ ಕಾರಿನಲ್ಲಿ 30 ಲಕ್ಷ ರೂ. ನಗದು ಎಸ್ಐಟಿಗೆ ಸಿಕ್ಕಿದೆ.
ಈ ಪ್ರಕರಣವು ರಾಜಕೀಯ ಭಾರೀ ಸಂಚಲನ ಹುಟ್ಟುಹಾಕಿದ್ದು, ಈಗ ಸಿಬಿಐ ತನಿಖೆ ಆರಂಭಿಸಲಿದೆ.