Friday, April 18, 2025
Google search engine

Homeಅಪರಾಧವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಇ.ಡಿ ವಶಕ್ಕೆ

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ಮಾಜಿ ಸಚಿವ ನಾಗೇಂದ್ರ ಇ.ಡಿ ವಶಕ್ಕೆ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ಪರಿಶಿಷ್ಟ ವರ್ಗಗಳ ಕಲಾಣ್ಯ ಇಲಾಖೆಯ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.

ಈ ಮೂಲಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣದ ತನಿಖೆ ಈಗ ಮತ್ತೊಂದು ಮಜಲು ತಲುಪಿದೆ. ಇಡಿ ಅಧಿಕಾರಿಗಳು ದಾಳಿಯ ವೇಳೆ ನಡೆಸಿದ ವಿಚಾರಣೆಯಲ್ಲಿ ನಾಗೇಂದ್ರ ಸರಿಯಾಗಿ ಉತ್ತರ ನೀಡದ ಕಾರಣ ಹೆಚ್ಚಿನ ವಿಚಾರಣೆಗಾಗಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಬುಧವಾರ ನಾಗೇಂದ್ರ ಹಾಗೂ ದದ್ದಲ್‌ ನಿವಾಸಗಳಲ್ಲಿ ಶೋಧ ನಡೆಸಿದ್ದ ಇ.ಡಿ. ಗುರುವಾರವೂ ಮುಂದುವರಿಸಿತು. ಇಬ್ಬರನ್ನೂ 6 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದು, ಪ್ರಶ್ನೆಗಳ ಸುರಿಮಳೆ ಹರಿಸಿದೆ. ನಾಗೇಂದ್ರ ಹಾಗೂ ದದ್ದಲ್‌ ಹಗರಣದಲ್ಲಿ ಶಾಮೀಲಾಗಿರುವುದಕ್ಕೆ ಇನ್ನಷ್ಟು ಸಾಕ್ಷ್ಯಕ್ಕಾಗಿ ಇ.ಡಿ. ತಡಕಾಡುತ್ತಿದೆ. ನಾಗೇಂದ್ರ ಅವರ ಪಿ.ಎ. ಹರೀಶ್‌ ಹಾಗೂ ಮತ್ತೋರ್ವ ಆಪ್ತ, ದದ್ದಲ್‌ ಆಪ್ತ ಪಂಪಣ್ಣ ಹಾಗೂ ದದ್ದಲ್‌ ಬಾವಮೈದುನನ್ನು ಗುರುವಾರ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಅವರ ಮೂಲಕವೇ ದದ್ದಲ್‌ ಹಾಗೂ ನಾಗೇಂದ್ರ ಹಗರಣದ ವ್ಯವಹಾರ ಕುದುರಿಸಿರುವ ಶಂಕೆ ವ್ಯಕ್ತವಾಗಿದೆ.

ಮತ್ತಿಕೆರೆಯ ಐಸಿಐಸಿಐ ಬ್ಯಾಂಕ್‌ನಲ್ಲಿ ನಾಗೇಂದ್ರ ಖಾತೆ ಹೊಂದಿದ್ದರು ಎನ್ನಲಾಗಿದೆ.ಹೀಗಾಗಿ ಇ.ಡಿ.ಯ ಮತ್ತೊಂದು ತಂಡ 2 ವಾಹನಗಳಲ್ಲಿ ಬ್ಯಾಂಕ್‌ ಅಧಿಕಾರಿಗಳನ್ನೇ ನಾಗೇಂದ್ರ ಫ್ಲ್ಯಾಟ್‌ಗೆ ಕರೆತಂದಿತ್ತು. ಅವರ ಮೂಲಕ ಹಗರಣದಲ್ಲಿ ವರ್ಗ ಮಾಡಲಾದ ದುಡ್ಡು ನಾಗೇಂದ್ರ ಬ್ಯಾಂಕ್‌ ಖಾತೆಗೆ ಸಂದಾಯವಾಗಿದೆಯೇ ಎಂಬುದನ್ನು ಪರಿಶೀಲಿಸಿದೆ.

ಗೌಪ್ಯವಾಗಿ ನಿಗಮದ ದುಡ್ಡನ್ನು ಹವಾಲಾ ರೂಪದಲ್ಲಿ ಲಪಟಾಯಿಸುವ ಮಧ್ಯವರ್ತಿಗಳ ಗ್ಯಾಂಗ್‌ನ ಸಹಾಯದಿಂದ ಕೃತ್ಯ ಎಸಗಲಾಗಿರುವ ಸುಳಿವು ಸಿಕ್ಕಿದೆ. ಮಧ್ಯವರ್ತಿಗಳನ್ನು ಮುಂದಿಟ್ಟುಕೊಂಡು ಮಾಜಿ ಸಚಿವ ನಾಗೇಂದ್ರ ಡೀಲ್‌ ಕುದುರಿಸಿದ್ದರೇ ಎಂಬ ಬಗ್ಗೆ ಅಧಿಕಾರಿಗಳಿಗೆ ಅನುಮಾನ ಹುಟ್ಟಿಕೊಂಡಿದೆ.

ನಾಗೇಂದ್ರಗೆ ಪ್ರಶ್ನೆಗಳ ಸುರಿಮಳೆ

ಬೆಂಗಳೂರಿನ ಡಾಲರ್ಸ್‌ ಕಾಲನಿಯಲ್ಲಿರುವ ನಾಗೇಂದ್ರ ಫ್ಲ್ಯಾಟ್‌ನಲ್ಲಿ ಗುರುವಾರ ಮಾಜಿ ಸಚಿವರಿಗೆ ಹಗರಣಕ್ಕೆ ಸಂಬಂಧಿಸಿದಂತೆ ನೂರಾರು ಪ್ರಶ್ನೆಗಳನ್ನು ಕೇಳಿದ್ದಾರೆ. ವಾಲ್ಮೀಕಿ ನಿಗಮದಿಂದ 187 ಕೋಟಿ ರೂ. ವರ್ಗಾವಣೆಯಾಗಿರುವುದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ? ನಿಮಗೆ ಅಧಿಕಾರಿಗಳು ಮಾಹಿತಿ ನೀಡಿರಲಿಲ್ಲವೇ? ಆತ್ಮಹತ್ಯೆ ಮಾಡಿಕೊಂಡಿರುವ ಚಂದ್ರಶೇಖರ್‌ ಡೆತ್‌ ನೋಟ್‌ನಲ್ಲಿ ನಿಮ್ಮ ಹೆಸರನ್ನು ಬರೆದಿಟ್ಟಿದ್ದರಲ್ಲ ಇದಕ್ಕೆ ಏನು ಹೇಳುತ್ತೀರಿ? ನಿಮ್ಮ ಗಮನಕ್ಕೆ ಬಂದರೆ ಏಕೆ ದೂರು ನೀಡಲಿಲ್ಲ ಎಂದು ಅಧಿಕಾರಿಗಳು ಪ್ರಶ್ನೆಗಳನ್ನು ಇಟ್ಟಿದ್ದರು. ಆದರೆ ನಾಗೇಂದ್ರ ಇದ್ಯಾವುದಕ್ಕೂ ಸಮರ್ಪಕವಾದ ಉತ್ತರ ನೀಡದೇ ಹಾರಿಕೆಯ ಮಾತುಗಳನ್ನು ಹೇಳಿ ಸುಮ್ಮನಾಗಿದ್ದಾರೆಂದು ತಿಳಿದು ಬಂದಿದೆ.

RELATED ARTICLES
- Advertisment -
Google search engine

Most Popular