ಪಿರಿಯಾಪಟ್ಟಣ: ಮಹಿಳೆಯರಿಂದ ಮಾತ್ರ ಮೌಲ್ಯಾಧಾರಿತ ಸಮಾಜ ನಿರ್ಮಾಣ ಸಾಧ್ಯ ಎಂದು ಚಿಂತಕಿ ಡಾ.ಶ್ವೇತಾ ಮಡಪ್ಪಾಡಿ ಹೇಳಿದರು. ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ವತಿಯಿಂದ ನಡೆದ ಮಹಿಳಾ ಸಮೂಹ ಮಹಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು, ಪ್ರಸ್ತುತ ಸಮಾಜದಲ್ಲಿ ಮೌಲ್ಯಗಳು ಮರೀಚಿಕೆಯಾಗುತ್ತಿರುವ ಪರಿಣಾಮ ಅನಾಚಾರ ಅತ್ಯಾಚಾರಗಳಂತ ಪ್ರಕರಣ ಹೆಚ್ಚುತ್ತಿರುವುದು ವಿಷಾಧಕರ ಸಂಗತಿಯಾಗಿದೆ, ಮಹಿಳೆ ಕುಟುಂಬ ನಿರ್ವಹಣೆ ಜತೆ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ಸಮಾಜದಲ್ಲಿ ಮೌಲ್ಯಗಳನ್ನು ಪುನರ್ ನಿರ್ಮಾಣ ಮಾಡುವ ಜವಾಬ್ದಾರಿ ಹೊರಬೇಕಿದೆ.
ಈ ನಿಟ್ಟಿನಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸ್ಥಾಪನೆ ಮೂಲಕ ಕುಟುಂಬದ ಆರ್ಥಿಕ ಬೆಳವಣಿಗೆ ಜತೆ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುತ್ತಿರುವ ಧಾನ್ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದರು.
ಧಾನ್ ಫೌಂಡೇಷನ್ ಯೋಜನಾ ಕಾರ್ಯ ನಿರ್ವಹಣಾಧಿಕಾರಿ ನಾರಾಯಣ ಹೆಗಡೆ ಅವರು ಮಾತನಾಡಿ ಮಹಿಳೆಯರು ಸಂಘಟಿತರಾದರೆ ಸಮಾಜದಲ್ಲಿ ಬಹುದೊಡ್ಡ ಬದಲಾವಣೆ ತರಬಹುದು, ಮಹಿಳೆಯರ ಒಗ್ಗೂಡುವಿಕೆಗೆ ಸ್ವಸಹಾಯ ಸಂಘಗಳ ಸಾಧನಗಳಾಗಿದ್ದು ಬಡ ಕುಟುಂಬಗಳ ಆರ್ಥಿಕ ಮತ್ತು ಆರ್ಥಿಕೇತರ ಸಬಲೀಕರಣಕ್ಕೆ ಧಾನ್ ಫೌಂಡೇಶನ್ ಮಹತ್ತರ ಕೊಡುಗೆ ನೀಡುತ್ತಿದೆ ಎಂದರು.
ಕೆನರಾ ಬ್ಯಾಂಕ್ ವ್ಯವಸ್ಥಾಪಕ ಸುಹಾಸನ್, ಒಕ್ಕೂಟದ ಅಧ್ಯಕ್ಷೆ ಲತಾ ಮಾತನಾಡಿದರು, ಈ ವೇಳೆ ಚಿಂತಕಿ ಡಾ.ಶ್ವೇತಾ ಮಡಪ್ಪಾಡಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಧಾನ್ ಫೌಂಡೇಶನ್ ಸಿಬ್ಬಂದಿ ವಿನೋದ, ರಜಿಯಾ, ಮಂಜು, ಮಮತಾ, ಶೈಲಾ, ರಾಜಮ್ಮ ಒಕ್ಕೂಟ ಪದಾಧಿಕಾರಿಗಳು ಸದಸ್ಯರು ಇದ್ದರು.
