ಧಾರವಾಡ: ದೇಶದಲ್ಲಿ ಒಟ್ಟು ಐದು ವಂದೇ ಭಾರತ್ ರೈಲುಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದ್ದಾರೆ. ಅದರಲ್ಲಿ ಧಾರವಾಡ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕೂಡ ಒಂದು. ಉತ್ತರ ಕರ್ನಾಟಕ ಭಾಗದ ಅದರಲ್ಲೂ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನತೆಯ ಬಹು ನಿರೀಕ್ಷಿತ ವಂದೇ ಭಾರತ್ ರೈಲು ಇಂದು ಅಧಿಕೃತವಾಗಿ ಧಾರವಾಡ ಮತ್ತು ಬೆಂಗಳೂರು ಮಧ್ಯೆ ಸಂಚಾರ ಮಾಡಿದೆ. ಈ ದಿನದ ನೆನಪಿಗಾಗಿ ಧಾರವಾಡದ ಕಲಾವಿದರೊಬ್ಬರು ವಿಶೇಷ ಕಲಾಕೃತಿಯೊಂದನ್ನು ರಚಿಸಿದ್ದಾರೆ.
ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ನಿರುಪಯುಕ್ತವಾದ ಥರ್ಮಕೋಲ್ ಹಾಗೂ ಫ್ಲೈವುಡ್ ಪೀಸ್‌ಗಳಿಂದ 3X2 ಅಳತೆಯ ವಂದೇ ಭಾರತ್ ರೈಲು ನಿರ್ಮಿಸಿದ್ದಾರೆ. ಅಲ್ಲದೇ ಅದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರುವ ಕಲಾಕೃತಿಯನ್ನೂ ಕೂಡ ರಚಿಸಿದ್ದಾರೆ. ಆ ಕಡೆಯಿಂದ ಈ ಕಡೆ ಧಾರವಾಡ ಬೆಂಗಳೂರು ಜಂಕ್ಷನ್ ಬೋರ್ಡ್ ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ.
ಈ ರೀತಿಯ ಕಲಾಕೃತಿ ರಚಿಸುವ ಮೂಲಕ ಕಲಾವಿದ ಮಂಜುನಾಥ ಹಿರೇಮಠ ಅವರು ವಂದೇ ಭಾರತ್ ರೈಲು ಸಂಚಾರಕ್ಕೆ ಶುಭಾಶಯ ಕೋರಿದ್ದಾರೆ. ಇನ್ನು ಧಾರವಾಡದ ರೈಲು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದ ನಂತರ ಧಾರವಾಡ -ಬೆಂಗಳೂರು ವಂದೇ ಭಾರತ್ ರೈಲಿಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕರಾದ ಅರವಿಂದ ಬೆಲ್ಲದ್, ಎಸ್.ವಿ.ಸಂಕನೂರ ಅವರು ಚಾಲನೆ ನೀಡಿದರು.
ಧಾರವಾಡದಿಂದ ಹೊರಟ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು. ಸ್ವತಃ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕರಾದ ಅರವಿಂದ ಬೆಲ್ಲದ್, ಎಸ್.ವಿ.ಸಂಕನೂರ ಕೂಡ ವಂದೇ ಭಾರತ್ ರೈಲಿನಲ್ಲಿ ಹುಬ್ಬಳ್ಳಿ ಕಡೆಗೆ ಪ್ರಯಾಣ ಬೆಳೆಸಿದರು. ಅಲ್ಲದೇ ರೈಲು ಸಂಚಾರದ ವೇಳೆಯಲ್ಲಿಯೇ ರಾಜ್ಯಪಾಲರು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರೈಲಿನಲ್ಲೇ ಉಪಹಾರ ಸೇವಿಸಿದ್ದಾರೆ. ಒಟ್ಟಾರೆ ವಂದೇ ಭಾರತ್ ರೈಲು ಸಂಚಾರಕ್ಕೆ ಅವಳಿ ನಗರದ ಜನರು ಸಂತಸ ವ್ಯಕ್ತಪಡಿಸಿದ್ದಾರೆ.