ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಚಪ್ಪರದಹಳ್ಳಿ ಗ್ರಾಮದ ಶ್ರೀ ಚಾಮುಂಡೇಶ್ವರಿ ಸೇವಾ ಟ್ರಸ್ಟ್ ಹಾಗೂ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಸಮಿತಿ ವತಿಯಿಂದ ಶ್ರೀ ಚಾಮುಂಡೇಶ್ವರಿ ಜನ್ಮದಿನವನ್ನು ಶನಿವಾರ ಆಚರಿಸಲಾಯಿತು.
ಬೆಳಗ್ಗೆ ಉತ್ಸವ ಮೂರ್ತಿಯನ್ನು ಗ್ರಾಮದ ಮೊಗೆಕೆರೆಗೆ ತೆಗೆದುಕೊಂಡು ಹೋಗಿ, ಗಂಗೆಯಲ್ಲಿ ತೊಳೆದು ಅಲಂಕರಿಸಿ ಪೂಜಿಸಲಾಯಿತು. ನಂತರ ಈ ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯದೊಂದಿಗೆ ಮೆರವಣಿಗೆ ಬರಲಾಯಿತು. ನಂತರ ದೇವಸ್ಥಾನದಲ್ಲಿ ಉತ್ಸವ ಮೂರ್ತಿಯನ್ನು ಇರಿಸಲಾಯಿತು. ದೇವಸ್ಥಾನದಲ್ಲಿರುವ ಶ್ರೀ ಚಾಮುಂಡಿ ದೇವಿಯನ್ನು ಶುಭ್ರಗೊಳಿಸಿ, ದೇವಿಗೆ ಮಂಗಳ ವಾದ್ಯದೊಂದಿಗೆ ವಿವಿಧ ರೀತಿಯ ಅಭಿಷೇಕ ಮಾಡಲಾಯಿತು. ಪುನಹ ಮೈಸೂರು ಚಾಮುಂಡಿ ಯಂತೆ ಈ ದೇವಿಯನ್ನು ಕೂಡ ಅಲಂಕರಿಸಿ, ನೂರಾರು ಭಕ್ತರ ಸಮ್ಮುಖದಲ್ಲಿ ಪುರೋಹಿತ ಮಂಜು ಆರಾಧ್ಯರವರ ತಂಡ ಪೂಜಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿರುವ ಶ್ರೀ ಮಹಿಶಾಸುರನಿಗೆ ಅಲಂಕರಿಸಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ್ದ ಹಾಗೂ ಗ್ರಾಮದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ಈ ಉತ್ಸವದಲ್ಲಿ ದೇವಸ್ಥಾನದ ಪುರೋಹಿತ ಅಣ್ಣೇಗೌಡ, ಹನುಮಂತ, ಪಟೇಲ್ ಕಾಳೇಗೌಡ, ಯಜಮಾನ್ ಕಾಳೇಗೌಡ, ನಿಂಗೇಗೌಡ, ಸಿ. ಕಾಳೇಗೌಡ, ವಸಂತ, ಸಮಿತಿಯ ಅಧ್ಯಕ್ಷ ಸಿ ಕೆ ವೆಂಕಟೇಶ್, ಖಜಾಂಚಿ ಅರುಣ, ಕಾರ್ಯದರ್ಶಿ ಅಶ್ವತ್ ಕುಮಾರ್ ಸಿ., ಪದಾಧಿಕಾರಿಗಳು, ಸದಸ್ಯರು, ಶ್ರೀದೇವಿಯ ಕುಟುಂಬಸ್ಥರು, ನೂರಾರು ಭಕ್ತರು ಪಾಲ್ಗೊಂಡಿದ್ದರು.