ಪಾಂಡವಪುರ : ತಾಲ್ಲೂಕಿನ ಚಿಕ್ಕಬ್ಯಾಡರಹಳ್ಳಿ ಗ್ರಾಮದ ಕೋಳಿ ಫಾರಂನಲ್ಲಿ ಜ.೧ ರಂದು ಕೋಳಿ ತುಂಬುವವರು ತೂಕದಲ್ಲಿ ವ್ಯತ್ಯಾಸ ಮಾಡಿದ ಘಟನೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪರಸ್ಪರ ರಾಜಿ ಮೂಲಕ ಸುಖಾಂತ್ಯ ಕಂಡಿತು. ಮೈಸೂರಿನ ಕೃಷ್ಣ ಕೋಳಿ ಕಂಪನಿಯವರು ಪಾಂಡವಪುರ ತಾಲ್ಲೂಕಿನ ಚಿಕ್ಕ ಬ್ಯಾಡರಹಳ್ಳಿ ಗ್ರಾಮದ ಹನುಮಂತೇಗೌಡರ ಕೋಳಿ ಫಾರಂ ನಲ್ಲಿ ಕೋಳಿಗಳನ್ನು ತುಂಬುವಾಗ ತೂಕದಲ್ಲಿ ವ್ಯತ್ಯಾಸ ಮಾಡಿದ್ದಾರೆಂದು ಕೋಳಿ ತುಂಬಲು ಬಂದಿದ್ದ ಸುನಿ ಮತ್ತು ಸಿದ್ದು ಎಂಬವರನ್ನು ಮರಕ್ಕೆ ಕಟ್ಟಿಹಾಕಲಾಗಿತ್ತು.
ಸದರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿತ್ತು. ಘಟನೆಯಿಂದ ಮನನೊಂದ ಕೃಷ್ಣ ಕೋಳಿ ಕಂಪನಿ ನೌಕರರು ಹನುಮಂತೇಗೌಡ ಮತ್ತು ಆನಂದ್ ವಿರುದ್ಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಬಳಿಕ ಹನುಮಂತೇಗೌಡ ಕೂಡ ಕೃಷ್ಣ ಕೋಳಿ ಕಂಪನಿ ವಿರುದ್ಧ ದೂರು ನೀಡಿದ್ದರು. ಗುರುವಾರ ಎರಡೂ ಕಡೆಯವರು ತೂಕದ ಯಂತ್ರದ ತಾಂತ್ರಿಕ ದೋಷದಿಂದ ತೂಕದಲ್ಲಿ ವ್ಯತ್ಯಾಸವಾಗಿದ್ದನ್ನು ಪರಸ್ಪರ ಒಪ್ಪಿಕೊಂಡು ರಾಜಿ ಮಾಡಿಕೊಂಡ ಕಾರಣ ಪ್ರಕರಣ ಸುಖಾಂತ್ಯ ಕಂಡಿತು.