ಮಂಡ್ಯ: ಬಿಗ್ ಬಾಸ್ ಖ್ಯಾತಿಯ ವರ್ತೂರ್ ಸಂತೋಷ್ ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಹಳ್ಳಿಕಾರ್ ಒಡೆಯ ಎಂಬ ಬಿರುದಿಗೆ ಕುತ್ತು ಬಂದಿದೆ.
ವರ್ತೂರ್ ಸಂತೋಷ್ ವಿರುದ್ಧ ಕಾನೂನು ಹೋರಾಟ ಪ್ರಾರಂಭಿಸಿರುವ ಹಳ್ಳಿಕಾರ್ ಸಂರಕ್ಷಕ ಕಲ್ಲಹಳ್ಳಿ ರವಿ ಪಟೇಲ್, ವಕೀಲರ ಮೂಲಕ ಮಾರ್ಚ್ 2 ರಂದು ಲೀಗಲ್ ನೋಟೀಸ್ ನೀಡಿದ್ದಾರೆ.
ಮಂಡ್ಯದಲ್ಲಿ ಹಳ್ಳಿಕಾರ್ ಸಾಕಾಣಿಕೆದಾರ ರವಿಕುಮಾರ್ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, 30 ದಿನಗಳಲ್ಲಿ ಉತ್ತರ ಕೊಡದಿದ್ದರೇ ನ್ಯಾಯಾಲಯದ ಮೊರೆಹೋಗಲು ನಿರ್ಧಾರ ಮಾಡಲಾಗಿದೆ. ವರ್ತೂರ್ ಸಂತೋಷ್ ಹಳ್ಳಿಕಾರ್ ಒಡೆಯ ಎಂದು ಕರೆಸಿಕೊಳ್ಳುತ್ತಿದ್ದಾರೆ. ಆ ಮೂಲಕ ತಾನೊಬ್ಬನೆ ಹಳ್ಳಿಕಾರ್ ಸಂರಕ್ಷಕ ಎಂದು ಬಿಂಬಿಸಿಕೊಳ್ಳುವ ಕೆಲಸವಾಗ್ತಿದೆ. ಈ ಬಿರುದಿನಿಂದ ಹಳ್ಳಿಕಾರ್ ಜನಾಂಗಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ತಲಾ ತಲಾಂತರದಿಂದ ಹಳ್ಳಿಕಾರ್ ಜನಾಂಗ ತಳಿಯನ್ನ ಉಳಿಸಿ, ಬೆಳಸಿಕೊಂಡು ಬರ್ತಿದ್ದಾರೆ. ಆರೇಳು ವರ್ಷಗಳಿಂದ ಸಂತೋಷ್ ಹಳ್ಳಿಕಾರ್ ಎತ್ತು ಸಾಕುತ್ತಿದ್ದಾನೆ. ಸಂತೋಷ್ ಕರೆಸಿಕೊಳ್ಳುತ್ತಿರುವ ಬಿರುದಿನಿಂದ ಹಳ್ಳಿಕಾರ್ ಜನಾಂಗಕ್ಕೆ ಅಪಮಾನವಾಗ್ತಿದೆ ಎಂದು ಕಿಡಿಕಾರಿದ್ದಾರೆ.
ಗೂಗಲ್ ನಲ್ಲಿ CHAIRMAN OF ALL INDIA HALLIKAR BREED CONSERVATION COMMITTE ಎಂದು ಮಾಹಿತಿ ಹಾಕಲಾಗಿದೆ. ಆ ಮೂಲಕ ಯುವ ಸಮುದಾಯಕ್ಕೆ ತಪ್ಪು ಸಂದೇಶ ರವಾನೆಯಾಗುತ್ತಿದೆ. ತಕ್ಷಣವೇ ಸುಳ್ಳು ಮಾಹಿತಿಯನ್ನ ಗೂಗಲ್ ನಿಂದ ತೆಗೆಯಬೇಕು ಎಂದು ನೋಟೀಸ್ ಜಾರಿ ಮಾಡಲಾಗಿದೆ.
ಸದ್ಯ ವಕೀಲರ ಮೂಲಕ ಲೀಗಲ್ ನೋಟೀಸ್ ನೀಡಲಾಗಿದೆ. ನೋಟೀಸ್ ಗೆ ಲಿಖಿತ ಉತ್ತರ ನೋಡಿಕೊಂಡು ನ್ಯಾಯಾಲಯದಲ್ಲಿ ದಾವೆ ಹೂಡಲು ಯೋಜನೆ ರೂಪಿಸಲಾಗಿದೆ.
ಹಳ್ಳಿಕಾರ್ ಸಂರಕ್ಷಕರು, ಹಳ್ಳಿಜಾರ್ ಜನಾಂಗದವರು ಒಟ್ಟಿಗೆ ಕಾನೂನು ಹೋರಾಟಕ್ಕೆ ತಯಾರಿ ಮಾಡಲಾಗಿದ್ದು, ಹಳ್ಳಿಕಾರ್ ತಳಿ ಬಗ್ಗೆಯೂ ಹಲವು ದಾಖಲಾತಿ ಸಂಗ್ರಹಿಸಲಾಗಿದೆ.
ಲೀಗಲ್ ನೋಟೀಸ್ ಕೊಟ್ಟು ಹಳ್ಳಿಕಾರ್ ಸಂರಕ್ಷಕರು ಕಾನೂನು ಹೋರಾಟದ ಮೊದಲ ಹೆಜ್ಜೆ ಇಟ್ಟಿದ್ದಾರೆ.