ಮೈಸೂರು: ಬಿಜೆಪಿ ಸರ್ಕಾರ ಇದ್ದಂತಹ ಅವಧಿಯಲ್ಲಿ ವರುಣಾ ಕ್ಷೇತ್ರಕ್ಕೆ ಯಾವುದೇ ಅನುದಾನ ಬಂದಿಲ್ಲದಿರುವುದರಿಂದ ಸಮಸ್ಯೆಗಳು ಹೆಚ್ಚಾಗಿದ್ದು ಮುಖ್ಯಮಂತ್ರಿ ಸಿದ್ಧರಾಮಯ್ಯರವರ ಗಮನಕ್ಕೆ ತಂದು ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸುವುದಾಗಿ ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ಧರಾಮಯ್ಯ ತಿಳಿಸಿದರು.
ವರುಣಾ ಕ್ಷೇತ್ರದ ರಂಗಸಮುದ್ರ ಹಿಟ್ಟುವಳ್ಳಿ, ಕುಪ್ಯ, ಭಟ್ಕಳಿಗೆ ಹುಂಡಿ, ಬೊಮ್ಮನಾಯಕನಹಳ್ಳಿ, ಅಗಸ್ತ್ಯಾಪುರ, ತುಂಬಲ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಕುಪ್ಯ ಗ್ರಾಮದಲ್ಲಿ ಮಾತನಾಡಿದ ಅವರು ಅಧಿಕಾರಿಗಳು ಕಂದಾಯ ಅದಾಲತ್, ಪಿಂಚಣಿ ಅದಾಲತ್, ಸ್ವತ್ತು ಅದಾಲತ್‌ಗಳನ್ನು ಪ್ರತಿ ಗ್ರಾಮಕ್ಕೆ ಬಂದು ಅರ್ಜಿಗಳನ್ನು ಸ್ವೀಕರಿಸಿ ಸಮಸ್ಯೆಯನ್ನು ಬಗೆಹರಿಸಬೇಕು. ವಿಧವಾ ವೇತನ, ಮಾಶಾಸನ ಯಾರಿಗೆ ಬರುತ್ತಿಲ್ಲ ಅರ್ಜಿಕೊಡಿ, ಎಲ್ಲಾ ಕಡೆ ಗೃಹಲಕ್ಷ್ಮಿ ಯೋಜನೆ ಬಗ್ಗೆ ದೂರುಗಳು ಬರುತ್ತಿದ್ದು ಈ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬಗೆಹರಿಸುವುದಾಗಿ ತಿಳಿಸಿದರು.
ಕುಪ್ಯ ಗ್ರಾಮದ ಮುಖ್ಯರಸ್ತೆ ಹದಗೆಟ್ಟಿದ್ದು ಈಗಾಗಲೇ PWD ಇಲಾಖೆಗೆ ಸೇರಿಸಲಾಗಿದೆ. ಬಸ್ ಸರಿಯಾಗಿ ಬರುತ್ತಿಲ್ಲ ಎಂದಾಗ ತಕ್ಷಣ K.S.R.T.C ಜಿಲ್ಲಾ ಅಧಿಕಾರಿ ಜೊತೆ ಫೋನಿನಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸಲು ತಿಳಿಸಿದರು. ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಸಿಬ್ಬಂದಿ ಇಲ್ಲ ಪದವಿ ಪೂರ್ವ ಕಾಲೇಜು ಬೇಕು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಾಡಿಕೊಡಿ, ಜಮೀನಿಗೆ ಹೋಗುವ ರಸ್ತೆ ಅಭಿವೃದ್ಧಿ ಪಡಿಸಿ, ಕನಕ ಭವನಕ್ಕೆ ಅನುದಾನ ನೀಡಿ, ಹೊಸ ಬಡಾವಣೆಗೆ ಬೀದಿ ದೀಪ ಹಾಕಿಸಿ, ನಾಲೆಗೆ ಡಕ್‌ಗಳನ್ನು ನಿರ್ಮಿಸಿ ಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದರು. ಈ ಎಲ್ಲಾ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಪರಿಹರಿಸುವುದಾಗಿ ಡಾ. ಯತೀಂದ್ರ ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಹೆಚ್.ಆರ್. ಸುರೇಶ್, E.O ಕೃಷ್ಣ, B.E.O ಶೋಭಾ, ರೇಷ್ಮೆ ವಿಸ್ತರಣಾಧಿಕಾರಿ ಸಿ.ಆರ್. ಕೃಷ್ಣ, ಜಿ.ಪಂ. ಮಾಜಿ ಸದಸ್ಯ ಮಹಾದೇವ, ಹೆಳವರಹುಂಡಿ ಸೋಮು, ರಮೇಶ್ ಮುದ್ದೇಗೌಡ, ಉದಯ ಹಿನಕಲ್, ಮೂಕನಹುಂಡಿ ಶಿವು, ಬಸವರಾಜು, ವಿಜಯ್, ಶಿವಸ್ವಾಮಿ, ಪ್ರದೀಪ್, ಪ್ರಭಾಕರ, ಭಾಗ್ಯಮ್ಮ ಹಾಜರಿದ್ದರು.