ಮೈಸೂರು: ಸಿದ್ದರಾಮಯ್ಯರವರನ್ನು ೨ನೇ ಬಾರಿ ಮುಖ್ಯಮಂತ್ರಿಯಾಗಲು ಕಾರಣರಾದ ವರುಣಾ ಕ್ಷೇತ್ರದ ಜನರ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ವರುಣಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಆಶ್ರಯ ಸಮಿತಿ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ವರುಣಾ ಕ್ಷೇತ್ರದ ರಂಗಾಚಾರಿ ಹುಂಡಿ, ರಂಗನಾಥಪುರ, ಹುನಗನಹಳ್ಳಿ, ಪಟ್ಟೆಹುಂಡಿ, ರಂಗಸಮುದ್ರ, ಎಳೆವೇಗೌಡನಹುಂಡಿ, ಅಗಸ್ತೆಪುರಗಳಿಗೆ ಭೇಟಿ ನೀಡಿ ಜನಸಂಪರ್ಕ ಸಭೆಗಳಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು ಸಿದ್ದರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಡವರ ಪರ ಇರುವ ಸರ್ಕಾರವಾಗಿದ್ದು. ಸಾಮಾಜಿಕ ನ್ಯಾಯದಡಿ, ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿದೆ. ಆದ್ದರಿಂದ ಎಲ್ಲಾ ಬಡವರು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ. ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಅನುಧಾನ ಬಿಡುಗಡೆ ಮಾಡದೆ ಇದ್ದುದರಿಂದ ಸಮಸ್ಯೆಗಳು ಹೆಚ್ಚಾಗಿದ್ದು. ಈಗ ನಮ್ಮ ಸರ್ಕಾರವೇ ಇದೆ, ಸಿದ್ದರಾಮಯ್ಯರವರೇ ಮುಖ್ಯಮಂತ್ರಿಗಳಾಗಿರುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.
ರಂಗಾಚಾರಿ ಹುಂಡಿಯಲ್ಲಿ ಗ್ರಾಮಕ್ಕೆ ಗ್ರಂಥಾಲಯಬೇಕು, ಸಮುದಾಯಭವನ ರಿಪೇರಿಯಾಗಬೇಕು, ಸ್ಮಶಾನ ಬೇಕು, ಶುದ್ಧ ಕುಡಿಯುವ ನೀರಿನ ಘಟಕಬೇಕು, ಮಳೆಹಾನಿ ಪರಿಹಾರ ಕೊಡಿಸಿ, ಜಮೀನಿನಲ್ಲಿ ಮನೆ ಕಟ್ಟಿದ್ದೇವೆ ವಿದ್ಯುತ್ ಸಂಪರ್ಕ ಕೊಡುತ್ತಿಲ್ಲ ಎಂದು ದೂರಿದರು ಅದಕ್ಕೆ ಉತ್ತರಿಸಿದ ಡಾ.ಯತೀಂದ್ರ ಸಿದ್ದಪ್ಪಾಜಿ ದೇವಸ್ಥಾನ ನಿರ್ಮಾಣಕ್ಕೆ ೫ ಲಕ್ಷ ಕೊಡುತ್ತೇವೆ. ಸ್ಮಶಾನ ಜಾಗ ಬಿಡಿಸಲು ಭೂಮಿ ಮಾಲೀಕರೊಂದಿಗೆ ಮಾತಾಡುತ್ತೇನೆ ಎಂದ ಅವರು ಜನರು ಹೇಳಿರುವ ಸಮಸ್ಯೆಗಳನ್ನು ಅಧಿಕಾರಿಗಳು ಪರಿಹರಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿಶೇಷಾಧಿಕಾರಿ ಕೆ.ಎನ್. ವಿಜಯ್, ಆಪ್ತ ಸಹಾಯಕರಾದ ಶಿವಸ್ವಾಮಿ, ಪ್ರದೀಪ್ ಕುಮಾರ್, ತಹಸಿಲ್ದಾರ್ ಶ್ರೀನಿವಾಸ್, ಡಿ.ಒ.ಎಸ್.ಪಿ. ಗೋವಿಂದರಾಜು, ಎಸ್.ಐ. ಮನೋಜ್‌ಕುಮಾರ್, ಬಿಇಒ ಶೋಭಾ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಶ್ವೇತಾ, ಎಇಇ ಚರಿತಾ ಸುಹಾಸಿನಿ, ಆರ್.ಐ. ಮಹೇಂದ್ರ ಮುಖಂಡರಾದ ಮಹಾದೇವ್, ರಮೇಶ್ ಮುದ್ದೇಗೌಡ, ಬಾಬು ಮಹಾದೇವಣ್ಣ, ಗ್ರಾ.ಪಂ. ಅಧ್ಯಕ್ಷೆ ಸುಜಾತ, ಹೆಳವರಹುಂಡಿ ಸೋಮು, ಮಂಜುನಾಥ್, ಸುನಿಲ್ ಮತ್ತಿತ್ತರರು ಹಾಜರಿದ್ದರು.