ಹಾಸನ: ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ವಿದ್ಯುತ್ ಸ್ಟೇಷನ್ ಅಳವಡಿಕೆಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ವಾಸ್ತು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ವಾಸ್ತು ಪ್ರಕಾರವೇ ವಿದ್ಯುತ್ ಸ್ಟೇಷನ್ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನಾನು ವಾಸ್ತು ಪ್ರಕಾರ ೨೦೦ ಕೋಟಿ ರೂ.ವೆಚ್ಚದಲ್ಲಿ ಎಲ್ಲಾ ಚಿಕಿತ್ಸಾ ಸೌಲಭ್ಯ ಸಿಗುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಿಸಿದ್ದೇನೆ, ಎಲ್ಲಾ ರೆಡಿ ಇದೆ ಎಂದು ಹೇಳಿದರು.
ಕರೆಂಟ್ ಸ್ಟೇಷನ್ ಹಾಕಬೇಕಾದರೆ ವಾಸ್ತು ಪ್ರಕಾರ ದಕ್ಷಿಣ ಅಥವಾ ಉತ್ತರ ಹಾಕಬೇಕಾ ನೋಡಿ ಎಂದು ಸಲಹೆ ನೀಡಿದ ರೇವಣ್ಣ, ಸ್ಟೇಷನ್ ಮಾಡುವಾಗ ಸಿಂಗಲ್ ಪೋಲ್‌ನಲ್ಲಿ ಮಾಡಬಹುದಾ, ಯಾವ ತರಹ ಮಾಡ್ತಿರಾ ನೋಡಿ ಎಂದರು. ಸುಖಾಸುಮ್ಮನೆ ಅರ್ಧ ಎಕರೆ ಪ್ರದೇಶದಲ್ಲಿ ಮಾಡೋದು ಬೇಡ ಎಂದ ರೇವಣ್ಣ, ೧೦ ಗುಂಟೆ ಜಾಗದಲ್ಲಿ ಮಾಡಿ. ಆಸ್ಪತ್ರೆ ವ್ಯಾಪ್ತಿಯಲ್ಲೇ ಎರಡು ಬಾಲಕಿಯರ ಕಾಲೇಜುಗಳಿವೆ. ಕುಳಿತುಕೊಂಡು ಮೇಡಂ ಹತ್ರ ಚರ್ಚೆ ಮಾಡಿ ಎಂದು ಹೇಳಿದರು. ಮೆಡಿಕಲ್ ಕಾಲೇಜು ಹತ್ತಿರ ಮಾಡುವಾಗ ಕಾರ್ಯ ಪಾಲಕ ಇಂಜಿನಿಯರ್, ನೀವು ಎಲ್ಲಾ ಕುಳಿತು ಚರ್ಚೆ ಮಾಡಿ ಎಂದರು.
ಸಭೆಯಲ್ಲಿ ಸ್ಥಳೀಯ ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.