Wednesday, April 9, 2025
Google search engine

Homeಸ್ಥಳೀಯನಾಡಿಗಾಗಿ ವಾಟಾಳರು ವಿಧಾನ ಪರಿಷತ್ ಸದಸ್ಯರಾಗಬೇಕು: ಸಾಹಿತಿ ಬನ್ನೂರು ರಾಜು 

ನಾಡಿಗಾಗಿ ವಾಟಾಳರು ವಿಧಾನ ಪರಿಷತ್ ಸದಸ್ಯರಾಗಬೇಕು: ಸಾಹಿತಿ ಬನ್ನೂರು ರಾಜು 

ಮೈಸೂರು: ನಮ್ಮ ಕನ್ನಡ ನಾಡಿನಲ್ಲಿ ಇವತ್ತೇನಾದರೂ ಇಷ್ಟರಮಟ್ಟಿಗಾದರೂ ನಮ್ಮ ಕನ್ನಡ  ಉಳಿದಿದೆಯೆಂದರೆ  ಅದಕ್ಕೆ ಕನ್ನಡ ಚಳವಳಿನಾಯಕ ವಾಟಾಳ್ ನಾಗರಾಜ್ ರಂತಹ ಕನ್ನಡಪರ ಹೋರಾಟಗಾರರೇ ಬಹುಪಾಲು  ಕಾರಣರೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.  

   ನಗರದ  ಶ್ರೀಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕೃಷ್ಣಮೂರ್ತಿ ಪುರಂನ ನಮನ ಕಲಾ ಮಂಟಪದಲ್ಲಿ ಏರ್ಪಡಿಸಿದ್ದ ಇತ್ತೀಚಿಗೆ ಲಿಂಗೈಕ್ಯರಾದ ಕನ್ನಡ ಹೋರಾಟಗಾರ  ತಾಯೂರು ವಿಠಲಮೂರ್ತಿ ಅವರಿಗೆ ನುಡಿ ನಮನಸಲ್ಲಿಕೆ ಕಾರ್ಯಕ್ರಮದ ಲ್ಲಿ ತಾಯೂರರ  ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂದು ಕನ್ನಡಕ್ಕಾಗಿ ನಿತ್ಯ ಕೈ ಎತ್ತುತ್ತಾ ಅಕ್ಷರಶಃ ಪ್ರಾಮಾಣಿಕ ಹೋರಾಟಗಾರರಾಗಿ ಬದ್ಧತೆಯಿಂದ ಬದುಕಿದ್ದ ತಾಯೂರು ವಿಠಲಮೂರ್ತಿ ಯವರು ಕನ್ನಡ ಭಾಷಾಭಿವೃದ್ಧಿಗಾಗಿ ಅಭಿಮಾನದಿಂದ ಕೆಲಸ ಮಾಡಿದವರೆಂದರು.

    ಕನ್ನಡ ಪರ ದನಿಯೆತ್ತುವ  ವಾಟಾಳರಂತಹ ಕನ್ನಡ ನುಡಿ ಭಂಟರು ಇಂದು ವಿಧಾನಸೌಧ ದೊಳಗೆ ಇಲ್ಲದೇ  ಹೋಗಿರುವುದರಿಂದ ಕನ್ನಡ ನೆಲ-ಜಲ, ನಾಡು-ನುಡಿ, ಸೇರಿದಂತೆ ಒಟ್ಟಾರೆ ಕನ್ನಡಕ್ಕೆ ಎಲ್ಲಾ ವಿಷಯದಲ್ಲೂ ಬಹಳ ಹಿನ್ನಡೆಯಾಗುತ್ತಿದೆ. ನಾಡಿನಲ್ಲಿ ಪರಭಾಷಿಗರ ದಬ್ಬಾಳಿಕೆ ಮೇರೆ ಮೀರುತ್ತಿದೆ. ಕುಡಿಯುವ ನೀರಿನ ಮೇಕೆದಾಟುವಿನಂತಹ ಯೋಜನೆಗಳನ್ನು  ನಮ್ಮ ನೆಲದಲ್ಲೇ ಜಾರಿಗೊಳಿಸಲಾಗದ ಪರಿಸ್ಥಿತಿಯಲ್ಲಿದ್ದೇವೆ. ಹಾಗಾಗಿ ಹಿಂದೆ ಐದಾರು ಬಾರಿ ವಾಟಾಳರು ಶಾಸಕರಾಗಿ ಜನಗಳಿಂದಲೇ ಆಯ್ಕೆಯಾಗಿ ಕೆಲಸ ಮಾಡಿದ್ದರೂ ಸಹ ಇವತ್ತಿನ ಪರಿಸ್ಥಿತಿಯಲ್ಲಿ ವಾಟಾಳ್ ರಂತಹ ಕನ್ನಡ ಚಳವಳಿಗಾರರು ಚುನಾವಣೆಯಲ್ಲಿ ಗೆದ್ದು ವಿಧಾನ ಸೌಧಕ್ಕೆ ಹೋಗುವುದು ಕನಸಿನ ಮಾತಾಗಿದೆ. ಆದ್ದರಿಂದ ಕನ್ನಡ ಭಾಷೆ ಮತ್ತು ಕರ್ನಾಟಕದ ಅಭಿವೃದ್ಧಿಯ ದೃಷ್ಟಿಯಿಂದ ನಮ್ಮ ಘನ ಸರ್ಕಾರ ವಾಟಾಳ ರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ನೇಮಿಸುವುದು ಅತ್ಯಂತ ಸೂಕ್ತವೆಂದು ಸರ್ಕಾರಕ್ಕೆ ಸಲಹೆ ನೀಡಿದರು.  

   ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಮಾತನಾಡಿ, ತಾಯೂರು ವಿಠಲ ಮೂರ್ತಿಯವರು  ತಾಯಿ ಹೃದಯದವರು. ಬೀದಿ ಬದಿ ವ್ಯಾಪಾರಿಗಳಿಗೆ, ಆಟೋ ಚಾಲಕರಿಗೆ, ಶೋಷಿತರಿಗೆ, ಹೋರಾಟಗಾರರಿಗೆ, ಬಡ ಬಗ್ಗರಿಗೆ ಯಾವುದೇ  ಸರ್ಕಾರಗಳಿಂದ ಏನೇ ಅನ್ಯಾಯವಾದರೂ ಬೀದಿಗಿಳಿದು ಅದನ್ನು ಖಂಡಿಸಿ ಪ್ರತಿಭಟಿಸುತ್ತಿದ್ದ ವ್ಯಕ್ತಿತ್ವ ಅವರದ್ದಾಗಿತ್ತು. ಮೊದಲು ಕನ್ನಡ ಪರ ಹೋರಾಟ ಎಂದರೆ ಸಾರ್ವಜನಿಕವಾಗಿ ಒಳ್ಳೆಯ ಗೌರವ ಸಿಗುತ್ತಿತ್ತು. ಇಂದು ಆ ಪರಿಸ್ಥಿತಿ ಇದೆಯೇ ಎಂದು ಪ್ರಶ್ನಿಸಿದ ಅವರು, ಪ್ರಸ್ತುತ ಯಾವುದೇ ಹೋರಾಟಗಳಿಗೂ ಜನ ಬರುವುದಿಲ್ಲ. ಅವರಿಗೆ ಐನೂರು, ಸಾವಿರ ಕೊಟ್ಟು ಕರೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಕೀಯ ಪಕ್ಷಗಳು ಸಾರ್ವಜನಿಕ ಸಭೆ ಸಮಾರಂಭಕ್ಕೆ ಜನರನ್ನು ದುಡ್ಡು ಕೊಟ್ಟು ಕರೆಸುವ ಪ್ರವೃತ್ತಿ ಆರಂಭವಾದ ದಿನದಿಂದ ಹೋರಾಟಗಳಿಗೆ ಜನ ಸೇರುವುದು ಕಡಿಮೆಯಾಗಿದ್ದು ಜನಪರವಾದ ಯಾವುದೇ ಪ್ರತಿಭಟನೆ ಹಮ್ಮಿಕೊಂಡರೂ ಅದು ನಮ್ಮ ಸುತ್ತಮುತ್ತಲಿನ ಸ್ನೇಹಿತರು ಕುಟುಂಬದವರನ್ನು ಕರೆತಂದು ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು  ಬೇಸರ  ವ್ಯಕ್ತಪಡಿಸಿದರು.

    ಈ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹಿನಕಲ್ ಬಸವರಾಜ್, ವಿಪ್ರ ಮುಖಂಡ, ಸಂಸ್ಕೃತಿ ಚಿಂತಕ ಡಾ.ರಘುರಾಂ ವಾಜಪೇಯಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ  ಮಡ್ಡಿಕೆರೆ  ಗೋಪಾಲ್ ಸೇರಿದಂತೆ ಹಲವರು ಮಾತನಾಡಿ ದಿ. ತಾಯೂರು ವಿಠಲಮೂರ್ತಿ ಅವರ ಕನ್ನಡಪರ ಹೋರಾಟಗಳನ್ನು ಸ್ಮರಿಸಿದರು. ಈ ವೇಳೆ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವರಾಜೇಂದ್ರ ಸ್ವಾಮಿ, ತಾಯೂರು ವಿಠಲ ಮೂರ್ತಿ ಪುತ್ರ ಗಣೇಶ್ ಮೂರ್ತಿ ಮತ್ತವರ ಕುಟುಂಬದ ಸದಸ್ಯರು ಹಾಗೂ ಅಭಿಮಾನಿ  ಬಳಗ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದು ಎಲ್ಲರೂ ನುಡಿ ನಮನದಲ್ಲಿ ಪುಷ್ಪ ನಮನ ಸಲ್ಲಿಸಿದರು.

RELATED ARTICLES
- Advertisment -
Google search engine

Most Popular