ಮಂಡ್ಯ : ತಾಲ್ಲೂಕಿನ ಮಾಚಹಳ್ಳಿ ಬಳಿ ವಿ.ಸಿ ನಾಲೆಗೆ ಕಾರು ಉರುಳಿ ಮೂವರು ಮೃತಪಟ್ಟಿದ್ದು, ಮೃತರ ಕುಟುಂಬಗಳಿಗೆ ತಲಾ ೧ ಲಕ್ಷ ರೂ. ವೈಯಕ್ತಿಕ ಪರಿಹಾರ ನೀಡುವುದಾಗಿ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಭರವಸೆ ನೀಡಿದ್ದಾರೆ.
ಮಂಡ್ಯ ತಾಲೂಕಿನ ಮಾಚನಹಳ್ಳಿ-ತಿಬ್ಬನಹಳ್ಳಿ ಸಮೀಪ ವಿ.ಸಿ ನಾಲೆಗೆ ಕಾರು ಉರುಳಿ ಮಂಡ್ಯ ನಗರದ ಹಾಲಹಳ್ಳಿ ಸ್ಲಂ ನಿವಾಸಿಗಳಾದ ಫಯಾಜ್, ಅಸ್ಲಾಂ ಪಾಷಾ, ಫಿರ್‌ಖಾನ್ ಮೃತಪಟ್ಟಿದ್ದರು. ಈ ದುರ್ಘಟನೆಗೆ ಶಾಸಕ ರವಿ ಕುಮಾರ್ ಗಣಿಗ ಕಂಬನಿ ಮಿಡಿದಿದ್ದಾರೆ. ಅಲ್ಲದೆ, ಮುಖ್ಯಮಂತ್ರಿಗಳು ಹಾಗೂ ಮಂಡ್ಯ ಜಿಲ್ಲಾ ಆಡಳಿತದಿಂದ ಹೆಚ್ಚಿನ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿ.ಸಿ. ನಾಲೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲನೆ ಮಾಡಿ ತಡೆಗೋಡೆ ನಿರ್ಮಾಣ, ಸೂಚನಾ ಫಲಕ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.