ಮಂಡ್ಯ: ವಿ.ಸಿ. ನಾಲಾ ಆಧುನೀಕರಣ ಕಾಮಗಾರಿ ಮಳೆಗಾಲ ಬಂದರೂ ಪೂರ್ಣಗೊಂಡಿಲ್ಲ. ಇದರಿಂದಾಗಿ ಮಳೆಗಾಲದಲ್ಲಾದ್ರೂ ರೈತರ ಬೆಳೆಗಳಿಗೆ ನೀರೊದಗಿಸುತ್ತಾ ರಾಜ್ಯ ಸರ್ಕಾರ ಎಂಬ ಪ್ರಶ್ನೆ ಮೂಡಿದೆ.
ಕೃಷಿ ಚಟುವಟಿಕೆ ಆರಂಭವಾದರೂ ತುಟಿ ಬಿಚ್ಚದೆ ಸರ್ಕಾರ ಮೌನಕ್ಕೆ ಶರಣಾಗಿದೆ. 300 ಕೋಟಿಗೂ ಅಧಿಕ ಮೊತ್ತದ ಬೃಹತ್ ಕಾಮಗಾರಿ ಇದಾಗಿದ್ದು, ಜನವರಿಯಲ್ಲೇ ನಾಲಾ ಆಧುನೀಕರಣ ಕಾಮಗಾರಿ ಆರಂಭವಾಗಿದೆ.
ಗುತ್ತಿಗೆದಾರರು 45 ದಿನದೊಳಗೆ ಕಾಮಗಾರಿ ಮುಗಿಸಬೇಕಿತ್ತು. ಕಾಲಮಿತಿ ಮುಗಿದರೂ ಕಾಮಗಾರಿ ಕುಂಟುತ್ತಾ ಸಾಗಿದೆ.

ಬರ, ನಾಲಾ ಕಾಮಗಾರಿ ನೆಪದಲ್ಲಿ ಎರಡು ಹಂಗಾಮಿನ ಬೆಳೆಗೆ ಸರ್ಕಾರ ನೀರೊದಗಿಸಿಲ್ಲ. ಈಗಾಗಲೇ ಪೂರ್ವ ಮುಂಗಾರು ಚುರುಗೊಂಡಿದ್ದು, ಮಳೆಯಿಂದಾಗಿ ನಾಲಾ ಆಧುನೀಕರಣ ಕಾಮಗಾರಿಗೂ ಅಡ್ಡಿಯಾಗಿದೆ.
ಈ ಹಂಗಾಮಿಗಾದರೂ ನೀರೊದಗಿಸುತ್ತಾರ ಎಂದು ಅನ್ನದಾತರು ಕಾದು ಕುಳಿತಿದ್ದಾರೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ, ನಾಲೆಗಳ ಮೂಲಕ ರೈತರ ಜಮೀನಿಗೆ ನೀರೊದಗಿಸಲು ಆಗ್ರಹಿಸಲಾಗಿದೆ.
ಕಾಮಗಾರಿ ಬಗ್ಗೆ ರೈತರು, ಸ್ಥಳೀಯರ ಅಸಮಾಧಾನ ವ್ಯಕ್ತಪಡಿಸಿದ್ದು, ಅಗಲೀಕರಣ ಮಾಡೋದನ್ನ ಬಿಟ್ಟು, ಕಿರಿದಾಗಿ ಸೈಡ್ ವಾಲ್ ಮಾಡ್ತಿದ್ದಾರೆ. ಇಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲ. ಸ್ವತಃ ರೈತರೇ ವಿಡಿಯೋ ಮಾಡಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.