ಬೆಂಗಳೂರು: ನಗರದ ವೀರನಪಾಳ್ಯದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ 40ಕ್ಕೂ ಹೆಚ್ಚು ಶೆಡ್‌ಗಳು ಬೆಂಕಿಗೆ ಆಹುತಿಯಾಗಿವೆ. ಈ ಶೆಡ್‌ಗಳಲ್ಲಿ ದಿನಗೂಲಿ ಕಾರ್ಮಿಕರು ತಮ್ಮ ಕುಟುಂಬದೊಂದಿಗೆ ವಾಸವಿದ್ದು, ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. ಘಟನೆಯು ಖಾಸಗಿ ಶಾಲೆಯ ಪಕ್ಕದ ಪ್ರದೇಶದಲ್ಲಿ ನಡೆದಿದೆ.
ಸುಮಾರು 50 ಶೆಡ್‌ಗಳಿರುವ ಈ ವಸತಿ ಪ್ರದೇಶದಲ್ಲಿ ಆರಂಭದಲ್ಲಿ ಒಂದು ಶೆಡ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಪ್ಲಾಸ್ಟಿಕ್ ಮತ್ತು ಮರದ ಸಾಮಗ್ರಿಗಳಿಂದ ನಿರ್ಮಿತವಾದ ಈ ಶೆಡ್‌ಗಳು ಬೆಂಕಿಯನ್ನು ಬೇಗನೆ ಹಬ್ಬಿದವು. ಬೆಂಕಿಯ ತೀವ್ರತೆಗೆ ಇಡೀ ಪ್ರದೇಶ ದಟ್ಟ ಹೊಗೆಯಿಂದ ಕವಿದಿದ್ದು, ಆತಂಕದ ವಾತಾವರಣ ನಿರ್ಮಾಣವಾಯಿತು. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ, ಜನರು ತಕ್ಷಣವೇ ಶೆಡ್‌ಗಳಿಂದ ಹೊರಬಂದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.
ಘಟನೆಯ ಮಾಹಿತಿ ಪಡೆದ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ತಕ್ಷಣ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿತು. ಈ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅಧಿಕಾರಿಗಳು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.