ರಾಮನಗರ: ಕನಕಪುರ ತಾಲ್ಲೂಕಿನ ನಾರಾಯಣಪುರ ಗ್ರಾಮ ಪಂಚಾಯಿತಿಗೆ ರಾಮನಗರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಗ್ವಿಜಯ್ ಬೋಡ್ಕೆ ಭೇಟಿ ನೀಡಿ ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ನೊಂದಣಿ ಕುರಿತು ಪರಿಶೀಲಿಸಿದರು. ಕೆಲಹೊತ್ತು ಕಂಪ್ಯೂಟರ್ ಆಪರೇಟರ್ ಬಳಿ ನಿಂತು ಅರ್ಜಿ ದಾಖಲಾತಿ ಬಗ್ಗೆ ವೀಕ್ಷಿಸಿ, ಹಲವು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ರಾತ್ರಿ 8 ಗಂಟೆವರೆಗೂ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ತಾಕೀತು ಮಾಡಿದರು. ಈಗಾಗಲೇ ರಾಜ್ಯದೆಲ್ಲೆಡೆ ಗೃಹಲಕ್ಷ್ಮೀ ಅರ್ಜಿ ನೋಂದಣಿ ಕಾರ್ಯ ಚುರುಕುಗೊಂಡಿದ್ದು, ರಾಮನಗರ ಜಿಲ್ಲೆಯಲ್ಲೂ ಅಷ್ಟೇ ವೇಗವಾಗಿ ನಮ್ಮ ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಕೆಲವು ಕಡೆ ಸರ್ವರ್ ಬ್ಯುಸಿ ಎಂದು ದೂರುಗಳು ಕೇಳಿಬರುತ್ತಿವೆ. ಆ ಸ್ಥಳಗಳಲ್ಲಿ ಖುದ್ದು ಭೇಟಿ ನೀಡಿ ಪರಿಶೀಲಿಸುವಂತೆ ಸಂಬ0ಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಯಾವುದೇ ಸಮಸ್ಯೆಯಾಗದಂತೆ ಸಾರ್ವಜನಿಕರಿಗೆ ಯೋಜನೆ ಅನುಕೂಲವಾಗುವಂತೆ ಅರ್ಜಿ ನೊಂದಣಿ ಮಾಡಿಸಿಕೊಳ್ಳಲಾಗುವುದು. ಈಗಾಗಲೇ ಗ್ರಾಮ ಪಂಚಾಯಿತಿಗಳಲ್ಲಿ ರಾತ್ರಿ 8 ಗಂಟೆಯವರೆಗೂ ಕರ್ತವ್ಯ ನಿರ್ವಹಿಸಿ ಎಂದು ಸುತ್ತೋಲೆಯನ್ನೂ ನೀಡಿದ್ದು, ಅದರಂತೆ ಸಾರ್ವಜನಿಕರು ಕ್ಯೂನಲ್ಲಿ ನಿಂತು ಶಾಂತರೀತಿಯಲ್ಲಿ ಅರ್ಜಿಯನ್ನೂ ಹಾಕಲು ಧಾವಿಸುತ್ತಿದ್ದಾರೆ ಎಂದು ಹೇಳಿದರು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಮತ್ತು ಆಂಡ್ರಾಯ್ಡ್ ಓ.ಪಿ.ಎಸ್ ಮಷೀನ್ (ANDROID POS MACHINE) ಬಳಕೆ ಸೇರಿದಂತೆ ವಿವಿಧ ಯೋಜನೆಗಳ ಕಡತ ಪರಿಶೀಲಿಸಿ ಸಂಬಧಪಟ್ಟ ಅಧಿಕಾರಿಗಳ ಬಳಿ ಮಾಹಿತಿ ಪಡೆದರು. ಇದೆ ವೇಳೆ ಅಂಗನವಾಡಿ ಕಟ್ಟಡ, ಗ್ರಂಥಾಲಯವನ್ನು ವೀಕ್ಷಿಸಿದ ಸಿಇಓ, ಗ್ರಂಥಾಲಯದ ಅನುಕೂಲವನ್ನು ಈಗಿನ ಮಕ್ಕಳು ಬಳಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಹಳ ಸಹಕಾರಿಯಾಗುವಂತಹ ಪುಸ್ತಕಗಳನ್ನು ಕೂಡ ಗ್ರಂಥಾಲಯದಲ್ಲಿ ಶೇಖರಿಸಿಡಲಾಗುವುದು ಪಂಚಾಯಿತಿ ಮಟ್ಟದಲ್ಲಿ ಗ್ರಾಮೀಣ ಪ್ರತಿಭಾನ್ವತಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭೈರಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ತಾಂತ್ರಿಕ ಸಂಯೋಜಕ ಮತ್ತು ಸಹಾಯಕ ಅಭಿಯಂತರರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಇದ್ದರು.